ಇನ್ನು 24*7 ಬ್ಯಾಂಕ್ ಸೇವೆ; ಆ.1ರಿಂದ ಗ್ರಾಹಕರಿಗೆ ಎನ್​ಎಸಿಎಚ್ ಸೌಲಭ್ಯ ಲಭ್ಯ

RBI
Published on

ಮುಂಬೈ: ನ್ಯಾಷನಲ್ ಆಟೋಮ್ಯಾಟೆಡ್ ಕ್ಲಿಯರಿಂಗ್ ಹೌಸ್ (ಎನ್​ಎಸಿಎಚ್) ಆಗಸ್ಟ್ 1ರಿಂದ ಕಾರ್ಯಾಚರಿಸಲಿದೆ. ವಾರದ ಎಲ್ಲ ದಿನವೂ 24 ಗಂಟೆ ಇದರ ಸೇವೆಯು ಲಭ್ಯವಿರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಶುಕ್ರವಾರ ಘೋಷಿಸಿದೆ. ಗ್ರಾಹಕರ ಅನುಕೂಲವನ್ನು ಹೆಚ್ಚಿಸುವುದಕ್ಕಾಗಿ ಇದರಲ್ಲಿ ರಿಯಲ್ ಟೈಮ್ ಗ್ರಾಸ್ ಸೆಟಲ್​ವೆುಂಟ್ (ಆರ್​ಟಿಜಿಎಸ್) ಸೇವೆಯು 24ಗಿ7 ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ. ಸದ್ಯ ಎನ್​ಎಸಿಎಚ್ ಸೌಲಭ್ಯ ಬ್ಯಾಂಕಿನ ಕೆಲಸದ ದಿನಗಳಲ್ಲಿ ಮಾತ್ರ ಲಭ್ಯವಿದೆ. ಇದು ಈ ವರ್ಷದ ಆಗಸ್ಟ್ 1ರಿಂದ ಎಲ್ಲ ದಿನಗಳಲ್ಲೂ ಲಭ್ಯವಿರಲಿದೆ.

ಏನಿದು ಎನ್​ಎಸಿಎಚ್?: ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಬೃಹತ್ ಪಾವತಿ ವಿತರಣೆಗಾಗಿ ಅಂದರೆ ಉದ್ಯೋಗಿಗಳಿಗೆ ವೇತನ, ಪಿಂಚಣಿ ಬಟವಾಡೆ, ಕಂಪನಿಗಳು ಷೇರುದಾರರಿಗೆ ಪಿಂಚಣಿ ವಿತರಿಸುವುದು, ಠೇವಣಿದಾರರಿಗೆ ಬಡ್ಡಿ ಹಂಚುವುದು ಇತ್ಯಾದಿ ಸೇವೆಗಳನ್ನು ಒದಗಿಸುವುದಕ್ಕಾಗಿ ರೂಪಿಸಿರುವ ವ್ಯವಸ್ಥೆಯೇ ಎನ್​ಎಸಿಎಚ್.

ವಿದ್ಯುತ್, ಗ್ಯಾಸ್, ಟೆಲಿಫೋನ್, ವಾಟರ್ ಮತ್ತು ಸಾಲದ ಮರುಪಾವತಿಯ ಅವಧಿ ಕಂತುಗಳನ್ನು ಪಾವತಿಸುವುದೂ ಇದರ ಮೂಲಕ ಸಾಧ್ಯವಿದೆ. ವಿಮಾ ಪ್ರೀಮಿಯಂ, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದಕ್ಕೂ ಇದು ಅನುಕೂಲ ಕಲ್ಪಿಸುತ್ತದೆ. ಬೃಹತ್ ಸಂಖ್ಯೆಯಲ್ಲಿರುವ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್​ಫರ್ (ಡಿಬಿಟಿ) ಯೋಜನೆಯ ಮೂಲಕ ಎನ್​ಎಸಿಎಚ್ ಪ್ರವರ್ಧಮಾನಕ್ಕೆ ಬಂದಿದೆ.

ಹೋಟೆಲ್ ಉದ್ಯಮ ಚೇತರಿಕೆಗೆ ಸವಲತ್ತು: ವಾಯುಯಾನ ಸಂಬಂಧಿ ವಲಯ, ಹೋಟೆಲ್ ಮತ್ತು ಪ್ರವಾಸೋದ್ಯಮದ ಚೇತರಿಕೆಗೆ 15,000 ಕೋಟಿ ರೂಪಾಯಿ ಮೌಲ್ಯದ ಪ್ರತ್ಯೇಕ ಲಿಕ್ವಿಡಿಟಿ ಗವಾಕ್ಷಿ ತೆರೆಯಲು ನಿರ್ಧರಿಸಿರುವುದಾಗಿ ಆರ್​ಬಿಐ ಶುಕ್ರವಾರ ಘೋಷಿಸಿದೆ.

ರೆಸಲೂಷನ್ 2.0 ವಿಸ್ತರಣೆ: ಎಂಎಸ್​ಎಂಇ ಮತ್ತು ಎಂಎಸ್​ಎಂಇಯೇತರ ಸಣ್ಣ ವ್ಯಾಪಾರೋದ್ದೇಶಗಳಿಗೆ 25 ಕೋಟಿ ರೂ. ತನಕ ಪಡೆದ ಸಾಲದ ರೀಸ್ಟ್ರಕ್ಚರಿಂಗ್​ಗೆ ‘ರೆಸಲೂಷನ್ ಫ್ರೇಮ್ರ್ಕ್ 2.0’ಅನ್ನು ಘೋಷಿಸಿ ಮೇ 2ರಂದು ಆರ್​ಬಿಐ ಅವಕಾಶ ನೀಡಿತ್ತು. ಇದರ ಮಿತಿಯನ್ನು ಈಗ 50 ಕೋಟಿ ರೂ.ಗೆ ಏರಿಕೆ ಮಾಡಿ ವಿಸ್ತರಿಸಿದೆ.

ಜಿ-ಎಸ್​ಎಪಿ 2.0 ಘೋಷಣೆ: ಕೋವಿಡ್​ನಿಂದ ಸಂಕಷ್ಟಕ್ಕೀಡಾಗಿರುವ ವಿವಿಧ ಸೆಕ್ಟರ್​ಗಳಿಗೆ ಚೇತರಿಕೆ ನೀಡುವುದಕ್ಕಾಗಿ ಜಿ-ಸೆಕ್ ಅಕ್ವಿಸಿಷನ್ ಪ್ರೋಗ್ರಾಂ (ಜಿ-ಎಸ್​ಎಪಿ) 2.0 ಯನ್ನು ಆರ್​ಬಿಐ ಘೋಷಿಸಿದೆ. ಇದರಂತೆ, ಸೆಕೆಂಡರಿ ಮಾರ್ಕೆಟ್​ನಿಂದ 1.20 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸೆಕ್ಯುರಿಟಿ ಬಾಂಡ್​ಗಳನ್ನು ಆರ್​ಬಿಐ ಖರೀದಿಸಲಿದೆ. ಈ ಪೈಕಿ 40,000 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸೆಕ್ಯುರಿಟಿಗಳನ್ನು ಜೂ.17ರಂದು ಖರೀದಿಸುವುದಾಗಿಯೂ ಘೋಷಿಸಿದೆ.

ಹಣದುಬ್ಬರ ಶೇ. 5.1 ಅಂದಾಜು: ಚಿಲ್ಲರೆ ಹಣದುಬ್ಬರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 5.1 ಮುಂದುವರಿ ಯಲಿದೆ. ವಾರ್ಷಿಕ ಹಣದುಬ್ಬರ ಪ್ರಮಾಣ 2026ರ ಮಾರ್ಚ್ 31ರ ತನಕ ಗರಿಷ್ಠ ಶೇ. 6ರಿಂದ ಕನಿಷ್ಠ ಶೇ. 2 ತಲುಪಬಹುದಾದ ಸಾಧ್ಯತೆ ಇದೆ.

ರೆಪೊ ರೇಟ್ ಬದಲಿಲ್ಲ: ದೇಶದ ಅರ್ಥ ವ್ಯವಸ್ಥೆ ಕೋವಿಡ್ 2ನೇ ಅಲೆಗೆ ತಲ್ಲಣಗೊಂಡಿರುವ ಸಂದರ್ಭದಲ್ಲಿ ಆರ್​ಬಿಐ ಸತತ ಆರನೇ ಬಾರಿಗೆ ಶೇಕಡ 4ರಲ್ಲೇ ರೆಪೊ ದರವನ್ನು ಸ್ಥಿರವಾಗಿರಿಸಿದೆ. ದೇಶದ ಜಿಡಿಪಿ ಬೆಳವಣಿಗೆ ದರದ ಮುನ್ನೋಟವನ್ನು ಶೇಕಡ 9.5ಕ್ಕೆ ಇಳಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಮಾನಿಟರಿ ಪಾಲಿಸಿ ಕಮಿಟಿ(ಎಂಪಿಸಿ) ಸಭೆಯಲ್ಲಿ ಈ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. 2020ರ ಮೇ 22ರಂದು ರೆಪೊ ದರ ಕೊನೆಯದಾಗಿ ಪರಿಷ್ಕರಣೆಯಾಗಿತ್ತು. ರೆಪೊ ದರ ಸ್ಥಿರವಾಗಿರುವ ಕಾರಣ ಬ್ಯಾಂಕುಗಳು ಆರ್​ಬಿಐನಲ್ಲಿ ಇರಿಸುವ ಠೇವಣಿಗೆ (ರಿವರ್ಸ್ ರೆಪೊ) ಶೇ. 3.35 ಬಡ್ಡಿದರ ಸಿಗುವುದು ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net