ತಾಳ್ಮೆ, ಅಹಂ ಮತ್ತು ಶಕ್ತಿ; ಏಪ್ರಿಲ್ 1ಕ್ಕೆ 200 ಚಿತ್ರಮಂದಿರಗಳಲ್ಲಿ ‘ತ್ರಿಕೋನ’

Thrikona
Published on

ಬೆಂಗಳೂರು: ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’ ಚಿತ್ರವು ಏ.1ರಂದು ಬಿಡುಗಡೆಯಾಗುತ್ತಿರುವುದು ಗೊತ್ತಿರಬಹುದು. ಈ ಚಿತ್ರವು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಚಿತ್ರದ ಕುರಿತು ಮಾತನಾಡುವ ಚಂದ್ರಕಾಂತ್, ‘ಮೂರು ವಿಭಿನ್ನ ತಲೆಮಾರು ಮತ್ತು ವಯೋಮಾನದ ಜನರ ಮೂಲಕ ಈ ಕಥೆ ಹೇಳುತ್ತಿದ್ದೇವೆ. ಒಂದು ಘಟನೆಯನ್ನು ಈ ಮೂರು ತಲೆಮಾರಿನವರು ಹೇಗೆ ಎದುರಿಸುತ್ತಾರೆ ಮತ್ತು ಒಂದು ಸಮಸ್ಯೆಯನ್ನು ತಾಳ್ಮೆ, ಅಹಂ ಮತ್ತು ಶಕ್ತಿಯಿಂದ ಎದುರಿಸಿದಾಗ ಏನೆಲ್ಲ ಆಗುತ್ತದೆ ಎಂದು ಹೇಳುವ ಪ್ರಯತ್ನ ಇದು’ ಎನ್ನುತ್ತಾರವರು. ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ರಾಜವೀರ್, ಮಾರುತೇಶ್ ಮುಂತಾದವರು ನಟಿಸಿದ್ದಾರೆ. ಸಾಧು ಕೋಕಿಲ ವಿಶೇಷ ಪಾತ್ರದಲ್ಲಿ ನಗಿಸಲಿದ್ದಾರೆ.

ಇದಕ್ಕೂ ಮುನ್ನ ‘ಪೆರೋಲ್’, ‘ಬರ್ಫಿ’ ಮತ್ತು ‘ಅಮೃತವಾಣಿ’ ಚಿತ್ರಗಳನ್ನು ನಿರ್ವಿುಸಿದ್ದ ರಾಜಶೇಖರ್ ಈ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ವಿುಸಿದ್ದಾರೆ. ಈಗಾಗಲೇ ‘ತಗ್ಗಿ ನಡಿ ಸುಮ್ಮನೆ...’, ‘ಗುಡಿಯಲ್ಲಿರೋ ದೇವ...’ ಮುಂತಾದ ಲಿರಿಕಲ್ ವಿಡಿಯೋಗಳ ಜತೆಗೆ, ಟೀಸರ್ ಸಹ ಬಿಡುಗಡೆಯಾಗಿದೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ಮತ್ತು ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net