ಒಂದು ಸುಳ್ಳು, ಮೂವರು ಪತ್ನಿಯರು! ಕಿರಾತಕನ ಮಾತಿಗೆ ಜಾರಿಬಿದ್ರು ಸುಂದರಿಯರು; ಗಂಡ ಆದ ಭಂಡ | Three Wives

ವಿಜಯವಾಣಿ - 2025-05-04T192021.963
Published on

Three Wives: ಮೂವರು ಮಹಿಳೆಯರನ್ನು ಮದುವೆಯಾಗಿ ಗುಟ್ಟಾಗಿ ಸಂಸಾರ ಸಾಗಿಸುತ್ತಿದ್ದ ವ್ಯಕ್ತಿ, ಏಕಕಾಲಕ್ಕೆ ಮೂವರೊಂದಿಗೂ ದಾಂಪತ್ಯ ಸಂಬಂಧ ಹೊಂದಿದ್ದು, ಈ ಸತ್ಯ ಮೂವರು ಮಹಿಳೆಯರಿಗೂ ಇಷ್ಟು ದಿನ ಗೊತ್ತಿರಲಿಲ್ಲ ಎಂಬ ಸಂಗತಿ ಸದ್ಯ ಪೊಲೀಸರನ್ನೇ ಅಚ್ಚರಿಗೆ ದೂಡಿದೆ.

ಆರೋಪಿಯನ್ನು ಫ್ಲೋರಿಡಾ ಮೂಲದ ಹೆನ್ರಿ ಬೆಟ್ಸಿ ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ. ಮೂವರು ಮಹಿಳೆಯರನ್ನು ಗುಟ್ಟಾಗಿ ಮದುವೆಯಾದ ಈತ, ಮೂವರಿಗೂ ಚಳ್ಳೆ ಹಣ್ಣು ತಿನ್ನಿಸಿದ್ದು, ದಾಂಪತ್ಯಗಳ ಗುಟ್ಟನ್ನು ಒಬ್ಬರಿಗೂ ಗೊತ್ತಾಗದ್ದಂತೆ ಜೀವನ ಸಾಗಿಸಿಕೊಂಡು ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೂವರನ್ನೂ ಅಜ್ಞಾತ ಸ್ಥಳದಲ್ಲಿರಿಸಿ, ಏಕಕಾಲಕ್ಕೆ ಪತ್ನಿಯರೊಂದಿಗೆ ದಾಂಪತ್ಯ ಸಂಬಂಧದಲ್ಲಿರುವುದು ಸ್ಪಷ್ಟವಾಗಿದೆ.

ಡೇಟಿಂಗ್ ಆ್ಯಪ್​ 'ಮಲ್ಲ'

ಮೂವರು ಪತ್ನಿಯರಿಗೂ ಈ ಸತ್ಯ ಸಂಗತಿ ಗೊತ್ತಿಲ್ಲ ಎಂಬುದು ನಿಜಕ್ಕೂ ಅಘಾತಕಾರಿ ವಿಷಯ. ಒಂದೇ ಒಂದು ದೊಡ್ಡ ಸುಳ್ಳು ಹೇಳಿಕೊಂಡು ಮೂವರನ್ನು ತನ್ನ ಬಲೆಗೆ ಸುಲಭವಾಗಿ ಬೀಳಿಸಿಕೊಂಡ ಕಿರಾತಕ ಹೆನ್ರಿ, ಮೂವರು ಮಹಿಳೆಯರನ್ನು ಡೇಟಿಂಗ್ ಆ್ಯಪ್​ ಮುಖಾಂತರವೇ ಖೆಡ್ಡಾಗೆ ಕೆಡವಿದ್ದಾನೆ. 'ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಓರ್ವ ಸುಂದರಿಯನ್ನು ಹುಡುಕುತ್ತಿರುವೆ. ನಂಬಿಕೆ ಅರ್ಹರಾಗಿರಬೇಕು, ನಾಟಕಗಳಿಗೆ ಜಾಗವಿಲ್ಲ' ಎಂದು ಬರೆದುಕೊಂಡು ಡಿವೋರ್ಸ್​ ಆಗಿರುವ ಮಹಿಳೆಯರನ್ನೇ ಟಾರ್ಗೆಟ್​ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಟಿಂಡರ್​, ಸ್ಟಿರ್​...

ಮೊದಲ ಪತ್ನಿ ಟೋನಿ ಬೆಟ್ಸಿಯನ್ನು ಡೇಟಿಂಗ್​​ ಆ್ಯಪ್ ಮುಖಾಂತರ ಪರಿಚಯ ಮಾಡಿಕೊಂಡು, ಆತ್ಮೀಯತೆ ಬೆಳೆಸಿಕೊಂಡು, ನಂತರ ಪ್ರೇಮದ ಹೆಸರಿನಲ್ಲಿ 2020ರಲ್ಲಿ ಮದುವೆಯಾಗಿದ್ದಾನೆ. ಇವರಿಬ್ಬರ ಪರಿಚಯ ಟಿಂಡರ್​ ಡೇಟಿಂಗ್ ಆ್ಯಪ್​ನಲ್ಲಿ ಆಗಿದೆ. ಆ ನಂತರ ಫೆ.22, 2022ರಂದು ಬ್ರಾಂಡಿ ಬೆಟ್ಸಿ ಎಂಬ ಮಹಿಳೆಯನ್ನು ಸ್ಟಿರ್​ ಡೇಟಿಂಗ್​ ಆ್ಯಪ್​ ಮುಖೇನ ವಿವಾಹವಾದ ಹೆನ್ರಿ, ಅದೇ ವರ್ಷದ ನವೆಂಬರ್​ 23ರಂದು ಮಿಶೆಲ್​ರಿಗೆ ಉಂಗುರ ತೊಡಿಸಿದ್ದಾನೆ. ಮೂವರಲ್ಲಿ ಒಬ್ಬರಿಗೂ ಅನುಮಾನ ಬರದಂತೆ ಬಹಳ ಚೆನ್ನಾಗಿ ನಟಿಸುತ್ತಿದ್ದ ಗಂಡನ ನಡೆಯನ್ನು ಶಂಕಿಸಿದ ಮೊದಲ ಪತ್ನಿ, ಆತನ ಮೊಬೈಲ್​ ಸಂದೇಶಗಳು, ದೂರವಾಣಿ ಸಂಪರ್ಕಗಳನ್ನು ಜಾಲಾಡಿದ್ದಾಳೆ. ಅಲ್ಲಿ ಆತನ ಬಂಡವಾಳ ಬಟಾ ಬಯಲಾಗಿದೆ.

ಗಂಡನ ಮೊಬೈಲ್​ ಹುಡುಕಾಡಿದಾಗ  ಆತನಿಗೆ ಬ್ರಾಂಡಿ ಮತ್ತು ಮಿಶೆಲ್ ಎಂಬ ಮಹಿಳೆಯರೊಂದಿಗೆ ಗುಟ್ಟಾಗಿ ಮದುವೆಯಾಗಿರುವ ಸಂಗತಿ ತಿಳಿಯಿತು ಎಂದು ಹೆನ್ರಿ ಮೊದಲ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ಮೋಸದ ಜಾಲ ಪತ್ತೆಹಚ್ಚಿದ ಪೊಲೀಸರಿಗೆ ಆತನ ಸಂಪೂರ್ಣ ವಿವರ ಲಭಿಸಿದೆ. ಮೂರು ಜನಕ್ಕೂ ಸುಳ್ಳು ಹೇಳಿ ಮದುವೆಯಾದ ಭಂಡ ಗಂಡನನ್ನು ಇದೀಗ ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net