

ಚೆನ್ನೈ: ಪೊಲೀಸ್ ಸಿಬ್ಬಂದಿ ಅಥವಾ ವಾಹನಗಳ ಮುಂದೆ ನಿಂತು ಟಿಕ್ಟಾಕ್ ವಿಡಿಯೋ ಮಾಡುವುದೆಂದರೆ ತಮಾಷೆಯಲ್ಲ. ಮೊದಲೇ ಟಿಕ್ಟಾಕ್ಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧವಿದೆ. ಈ ಹಿಂದೆ ಸರ್ಕಾರವು ಕೂಡ ಟಿಕ್ಟಾಕ್ನಿಂದ ಆಗುತ್ತಿರುವ ವ್ಯತ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಂತಹದರಲ್ಲಿ ಪೊಲೀಸ್ ವಾಹನದ ಮುಂದೆಯೇ ಟಿಕ್ಟಾಕ್ ಮಾಡಿದ ಹುಡುಗರಿಗೆ ಏನು ತೊಂದರೆ ಕಾದಿದೆಯೋ ಎಂದು ಊಹಿಸಿದರೆ, ನಿಮ್ಮ ಊಹೆ ತಪ್ಪಾಗಲಿದೆ.
ಹೌದು, ಪೊಲೀಸ್ ವಾಹನದ ಮುಂದೆ ನಿಂತು ಟಿಕ್ಟಾಕ್ ಮಾಡಿದ ಮೂವರು ಹುಡುಗರನ್ನು ಪ್ರಶ್ನಿಸದೇ ತಮಿಳುನಾಡು ಪೊಲೀಸ್ ಇಲಾಖೆ ತೆಗೆದುಕೊಂಡ ನಿರ್ಣಯ ಇದೀಗ ಎಲ್ಲರ ಗಮನ ಸೆಳೆದಿದೆ.
ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಟಿಕ್ಟಾಕ್ ವಿಡಿಯೋವೊಂದು ವೈರಲ್ ಆಗುತ್ತದೆ. ವಿಡಿಯೋದಲ್ಲಿ ಹುಡುಗರಿಬ್ಬರು ಪೊಲೀಸ್ ವ್ಯಾನ್ ಮೇಲೆ ಕುಳಿತು ಸಿನಿಮಾ ಡೈಲಾಗ್ ಒಂದಕ್ಕೆ ಲಿಪ್ ಸಿಂಕ್ ಮಾಡುತ್ತಾ ಹಾಡು ಬಂದ ತಕ್ಷಣ ವ್ಯಾನ್ನಿಂದ ಕೆಳಗಿಳಿದು ನಟನೆ ಮಾಡುತ್ತಾರೆ. ಇದನ್ನು ಮತ್ತೊಬ್ಬ ಹುಡುಗ ರೆಕಾರ್ಡ್ ಮಾಡುತ್ತಿರುತ್ತಾನೆ.
ಅಂದಹಾಗೆ ವಿಡಿಯೋದಲ್ಲಿರುವ ವ್ಯಾನ್ ತೂತುಕುಡಿಯ ಜಿಲ್ಲೆಯ ಸಶಸ್ತ್ರ ಮೀಸಲು ಘಟಕಕ್ಕೆ ಸೇರಿದ್ದಾಗಿದ್ದು, ಕ್ಯಾಡ್ವೆಲ್ ಕಾಲನಿಯಲ್ಲಿರುವ ವರ್ಕ್ಶಾಪ್ನಲ್ಲಿ ಬಿಟ್ಟಿದ್ದಾಗ ಹುಡುಗರು ವಿಡಿಯೋ ಮಾಡಿದ್ದಾರೆ. ಹುಡುಗರು ಅಂದಾಜು 17 ವಯಸ್ಸಿನವರು ಎನ್ನಲಾಗಿದೆ. ಹುಡುಗರ ವಿಡಿಯೋವನ್ನು ವ್ಯಾನ್ ಡ್ರೈವರ್ ಗಮನಿಸಿ ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಬಳಿಕ ತೂತುಕುಡಿಯ ಡಿಎಸ್ಪಿ ಆರ್. ಪ್ರಕಾಶ್ ಹುಡುಗರನ್ನು ಕರೆಯಿಸಿ ಅವರನ್ನು ಶಿಕ್ಷಿಸದೇ, ಮಾತುಕತೆ ನಡೆಸುತ್ತಾರೆ
ಮೂವರು ಹುಡುಗರಲ್ಲಿ ಓರ್ವ ಸಾಹಿತ್ಯ, ಇನ್ನೋರ್ವ ಐಟಿ ಓದುತ್ತಿದ್ದಾನೆ. ಮತ್ತೋರ್ವ 6ನೇ ತರಗತಿಗೆ ಶಾಲೆ ಬಿಟ್ಟಿದ್ದಾನೆ. ಪೊಲೀಸ್ ಇಲಾಖೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದಾಗ ಅವರನ್ನು ಶಿಕ್ಷಿಸುವ ಬದಲು ಪ್ರೋತ್ಸಾಹಿಸುವುದು ಉತ್ತಮವೆಂದು ನನಗೆ ಮನವರಿಕೆಯಾಯಿತು. ನಾವು ಪೊಲೀಸ್ ಸ್ನೇಹ ಬಳಗವನ್ನು ಹೊಂದಿದ್ದೇವೆ. ಅದರಲ್ಲಿ ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳು ಕೆಲ ಸಮಯ ಸಂಚಾರಿ ಬೀಟ್ ನಡೆಸುತ್ತಾರೆ. ಹೀಗಾಗಿ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಈ ನಡೆಯಿಂದ ಪೊಲೀಸ್ ಇಲಾಖೆಯನ್ನು ಧನಾತ್ಮಕ ದೃಷ್ಟಿಯಿಂದ ನೋಡುತ್ತಾರೆ ಎಂಬ ನಂಬಿಕೆಯನ್ನು ಪೊಲೀಸ್ ಇಲಾಖೆ ಹೊಂದಿದ್ದು, ವಿದ್ಯಾರ್ಥಿಗಳು ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಇದು ಕೂಡ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಆದರೆ, ಶಾಲೆಯನ್ನು ಅರ್ಧಕ್ಕೆ ಬಿಟ್ಟ ಹುಡುಗನಿಗೆ ಈ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)