

ಬೆಂಗಳೂರು: ನಗರದಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಸೈಕಲ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಪ್ರಕರಣ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಬೆಟ್ಟಹಲಸೂರು ನಿವಾಸಿ ನಾಗರಾಜು(೨೮) ಮೃತ ಸೈಕಲ್ ಸವಾರ. ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜು ಶನಿವಾರ ಕೆಲಸ ಮುಗಿಸಿಕೊಂಡು ರಾತ್ರಿ ೧೦.೩೦ರ ಸುಮಾರಿಗೆ ಸೈಕಲ್‌ನಲ್ಲಿ ಮನೆಯತ್ತ ಹೊರಟ್ಟಿದ್ದರು. ಸೆಂಟ್ರಲ್ ಜೈಲು ರಸ್ತೆಯಲ್ಲಿ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಏಕಾಏಕಿ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ನಾಗರಾಜು ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದು, ಸ್ಥಳೀಯರು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ನಾಗರಾಜು ಮೃತಪಟ್ಟಿದ್ದಾರೆ.
ಕಾರು ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷೃದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಸಂಬಂಧ ಕಾರು ಜಪ್ತಿ ಮಾಡಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾರಿ ಡಿಕ್ಕಿ ಹೊಡೆದು ಪಾದಾಚಾರಿ ಸಾವು:
ಮತ್ತೊಂದು ಪ್ರಕರಣದಲ್ಲಿ ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದು ಪಾದಾಚಾರಿ ಮೃತಪಟ್ಟಿರುವ ಪ್ರಕರಣ ಕೆ.ಜಿ.ಹಳ್ಳಿ ನಡೆದಿದೆ. ನಾಗವಾರ ನಿವಾಸಿ ಮಹೇಂದ್ರಕುಮಾರ್(೫೦) ಮೃತಪಟ್ಟವರು.
ಖಾಸಗಿ ಆಸ್ಪತ್ರೆಯಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುವ ಮಹೇಂದ್ರ ಶನಿವಾರ ಕೆಲಸ ಮುಗಿಸಿಕೊಂಡು ಸಂಜೆ ೬.೪೫ರ ಸುಮಾರಿಗೆ ಜೆಎಂಜೆ ರಸ್ತೆಯ ಜೂಡಿಯಾ ಶಾಪಿಂಗ್ ಮಾಲ್ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಮೆಟ್ರೋ ಕಾಮಗಾರಿಕೆ ಕಾಂಕ್ರಿಟ್ ಸಾಗಿಸುತ್ತಿದ್ದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಮಹೇಂದ್ರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ನಿರ್ಲಕ್ಷೃದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆ ಸಂಬಂಧ ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫುಡ್ ಡೆಲಿವರಿ ಬಾಯ್ ಮೃತ:
ಇನ್ನೊಂದು ಪ್ರಕರಣದಲ್ಲಿ ಸಿಮೆಂಟ್ ಮಿಕ್ಸರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿಮೆಂಟ್ ಮಿಕ್ಸರ್ ಲಾರಿಯ ಚಕ್ರ ಉರುಳಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ಯಲಹಂಕದ ಅಟ್ಟೂರಿನಲ್ಲಿ ನಡೆದಿದೆ.
ಚಿಕ್ಕಬೊಮ್ಮಸಂದ್ರ ನಿವಾಸಿ ದೇವರಾಜು(೨೧) ಮೃತ ದುರ್ದೈವಿ. ಯಾದಗಿರಿ ಮೂಲದ ದೇವರಾಜು ನಗರದಲ್ಲಿ ಜೊಮ್ಯಾಟೋದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ೧೦.೩೦ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಅಟ್ಟೂರು ಲೇಔಟ್‌ನ ಬಸ್ ನಿಲ್ದಾಣದ ಬಳಿ ಎಂ.ಎಸ್.ಪಾಳ್ಯದ ಕಡೆಗೆ ಹೋಗುತ್ತಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ದೇವರಾಜು ದೇಹದ ಮೇಲೆಯೇ ಲಾರಿಯ ಚಕ್ರ ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಲಾರಿ ಚಾಲಕ ಅತಿವೇಗ ಹಾಗೂ ನಿರ್ಲಕ್ಷೃದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಲಾರಿ ಚಾಲಕನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.