ಮೂರು ಪ್ರತ್ಯೇಕ ಅಪಘಾತ: ಮೂವರ ಸಾವು

accident-15
Published on

ಬೆಂಗಳೂರು: ರಾಜಧಾನಿಯಲ್ಲಿ ಪ್ರತ್ಯೇಕವಾಗಿ ನಡೆದ ಮೂರು ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ರಸ್ತೆ ದಾಟುವಾಗ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಆದಿಲಕ್ಷ್ಮಮ್ಮ(೬೯) ಮೃತರು.
ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ ಸುಮಾರು ೬.೧೫ಕ್ಕೆ ಈ ಘಟನೆ ನಡೆದಿದೆ. ಅಪಘಾತ ಸಂಬಂಧ ಬಿಬಿಎಂಪಿ ಕಸದ ಲಾರಿ ಚಾಲಕ ಮೊಹಮ್ಮದ್ ಎಂಬಾತನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಆದಿಲಕ್ಷ್ಮಮ್ಮ ಕೆಲ ದಿನಗಳ ಹಿಂದೆ ನಗರದ ಜಂಬೂಸವಾರಿ ದಿಣ್ಣೆಯಲ್ಲಿರುವ ಮಗಳ ಮನೆಗೆ ಬಂದಿದ್ದರು. ಚಿತ್ತೂರಿನಲ್ಲಿ ಸಂಬಂಧಿಕರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗಳು ಚಿತ್ತೂರಿಗೆ ತೆರಳಲು ಸೋಮವಾರ ಬೆಳಗ್ಗೆ ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದ ಬಳಿ ಬಂದಿದ್ದಾರೆ. ಈ ವೇಳೆ ಬಸ್ ಬಂದ ತಕ್ಷಣ ಮಗಳು ಓಡಿ ಹೋಗಿ ಬಸ್ ಹತ್ತಿದ್ದಾರೆ. ಆದಿಲಕ್ಷ್ಮಮ್ಮ ಬಸ್ ಹತ್ತಲು ರಸ್ತೆ ದಾಟುವಾಗ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಆದಿಲಕ್ಷ್ಮಮ್ಮ ಅವರ ದೇಹದ ಮೇಲೆಯೇ ಕಸದ ಲಾರಿಯ ಚಕ್ರಗಳು ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಸಂಬಂಧ ಬಿಬಿಎಂಪಿ ಕಸದ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೈಲರ್ ಸಾವು
ಬೈಕ್‌ನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಟೈಲರ್ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತುಮಕೂರು ಮೂಲದ ವಿಶ್ವನಾಥ್(೩೪) ಮೃತರು. ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿರುವ ವಿಶ್ವನಾಥ್, ಕುಟುಂಬ ಸಮೇತ ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಟೈಲರಿಂಗ್ ಕೆಲಸ ಮಾಡಿಕೊಂಡಿದ್ದರು. ಭಾನುವಾರ ರಾತ್ರಿ ೧೧.೩೦ರ ಸುಮಾರಿಗೆ ಕೆಂಗೇರಿ ಕಡೆಯಿಂದ ಸುಂಕದಕಟ್ಟೆ ಕಡೆ ಬೈಕ್‌ನಲ್ಲಿ ಬರುವಾಗ ೧೦೦ ಅಡಿ ರಸ್ತೆಯ ಮಂಗನಹಳ್ಳಿ ಕ್ರಾಸ್ ಬಳಿ ಅತೀವೇಗದಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ತಲೆ ಮತ್ತು ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ , ಬಳಿಕ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜ್ಞಾನಭಾರತಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರ ಸಾವು:
ಮತ್ತೊಂದು ಪ್ರಕರಣದಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾರೆ. ಕೂಡ್ಲು ನಿವಾಸಿ ವೇಣುಗೋಪಾಲ್(೫೩) ಮೃತರು. ಸೋಮವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ಬೊಮ್ಮನಹಳ್ಳಿ ಜಂಕ್ಷನ್ ಬಳಿ ದುರ್ಘಟನೆ ನಡೆದಿದೆ.
ಸೀರೆ ವ್ಯಾಪಾರಿಯಾಗಿರುವ ವೇಣುಗೋಪಾಲ್, ಸೋಮವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ಬೊಮ್ಮನಹಳ್ಳಿ ಜಂಕ್ಷನ್ ಕಡೆಯಿಂದ ಮಡಿವಾಳ ಕಡೆ ಬೈಕ್‌ನಲ್ಲಿ ಬರುತ್ತಿದ್ದು, ಮೆಟ್ರೋ ಪಿಲ್ಲರ್ ನಂ ೨೩೨ರ ಬಳಿ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ವೇಣುಗೋಪಾಲ್ ಮೇಲೆ ಟಿಪ್ಪರ್ ಲಾರಿ ಹರಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಚಾಲಕ ಚೆಲುವೆಗೌಡ(೩೫) ಎಂಬಾತನನ್ನು ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net