

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ 2025 ಮುಗಿದು ಹೊಸ ವರ್ಷ ಆರಂಭಗೊಳ್ಳಲಿದೆ. ಹೀಗಿರುವಾಗ, ಖುಷಿಯ ಕ್ಷಣಗಳಿಗಿಂತ ದುಃಖಕರ ಘಟನೆಗಳು (Accidents) ಸಂಭವಿಸಿರುವುದೇ ಹೆಚ್ಚು. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ನಡೆದ ಮೂರು ಪ್ರತ್ಯೇಕ ದುರ್ಘಟನೆಗಳು ಜನರಿಂದ ಮರೆಯಲು ಕಷ್ಟಸಾಧ್ಯವೇ ನಿಜ. ಕಾರಣ, ಈ ಅಪಘಾತಗಳು ಭೀಕರತೆಗೆ ಸಾಕ್ಷಿಯಾಗಿದ್ದು, ಅನೇಕರ ಪ್ರಾಣವನ್ನು ಕಸಿದುಕೊಂಡಿದೆ.
ಈ ದುರ್ಘಟನೆಗಳಿಂದ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ತಮ್ಮವರನ್ನು ಕಳೆದುಕೊಂಡು ಕಂಗಾಲಾಗಿವೆ. ತಿಂಗಳು ತುಂಬಿದ ಶಿಶುಗಳಿಂದ ಹಿಡಿದು ವೃದ್ಧರನ್ನು ಸಾವು ಬಿಡಲಿಲ್ಲ. ಇತ್ತೀಚೆಗಷ್ಟೇ ನಡೆದ ಕರ್ನೂಲ್ ಬಸ್ ಅಫಘಾತ, ಜೈಪುರ ಮತ್ತು ಚೆವೆಲ್ಲಾದಲ್ಲಿ ಸಂಭವಿಸಿದ ಅನಾಹುತಗಳು ಜನರಲ್ಲಿ ತೀವ್ರ ದುಃಖ ತಂದೊಡ್ಡಿದೆ. ಆದಾಗ್ಯೂ, ಈ ಮೂರು ಅಪಘಾತಗಳಲ್ಲಿ ಒಂದು ಪ್ರಮುಖ ಅಂಶ ಮಾತ್ರ ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಮೂರು ಪ್ರತ್ಯೇಕ ಅಪಘಾತದಲ್ಲಿ 19 ಮಂದಿ ಸಾವಿಗೀಡಾಗಿರುವುದು ಡೇಂಜರ್ 19 ಎಂಬ ಪದಕ್ಕೆ ಕಾರಣವಾಗಿದೆ.
ಸೋಮವಾರ (ನ.03) ಬೆಳಗ್ಗೆ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದ ಮಿರ್ಜಗುಡ ಬಳಿಯ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ತಪ್ಪು ಮಾರ್ಗದಲ್ಲಿ ಅತಿ ವೇಗದಲ್ಲಿ ಬಂದ ಟಿಪ್ಪರ್ ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ, ಹಲವರು ಸ್ಥಳದಲ್ಲೇ ಮೃತಪಟ್ಟರು. ಅಪಘಾತದ ತೀವ್ರತೆಗೆ ಬಸ್ನ ಅರ್ಧದಷ್ಟು ಭಾಗ ನಜ್ಜುಗುಜ್ಜಾಗಿದೆ.
ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಕೆಲವೇ ಕ್ಷಣಗಳಲ್ಲಿ ಕಾಣಿಸಿಕೊಂಡ ಬೆಂಕಿಗೆ ಸುಟ್ಟು ಕರಕಲಾದ ಘಟನೆ ಅತ್ಯಂತ ದುಃಖಕರ ಸಂಗತಿ. ಈ ದುರಂತದಲ್ಲಿ ಚಾಲಕನ ಎಡವಟ್ಟಿಗೆ 19 ಮಂದಿ ಪ್ರಾಣ ಕಳೆದುಕೊಂಡರು. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮುಂಜಾನೆ ವೇಳೆ ಬೈಕ್ಗೆ ಗುದ್ದಿದ ಪರಿಣಾಮ, ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. 46 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ನಲ್ಲಿ ಇಬ್ಬರು ಚಾಲಕರು ಸೇರಿ 27 ಮಂದಿ ಸಾವಿನಿಂದ ಪಾರಾದರೆ, 19 ಮಂದಿ ಜೀವಂತವಾಗಿ ಸುಟ್ಟು ಹೋದರು.
ರಾಜಸ್ಥಾನದಲ್ಲಿ ಮತ್ತೊಂದು ಗಂಭೀರ ಅಪಘಾತ ಸಂಭವಿಸಿದೆ. ಸೋಮವಾರ (ನ.03), ಚೆವೆಲ್ಲಾ ಬಸ್ ದುರಂತ ನಡೆದ ಕೆಲವೇ ಗಂಟೆಗಳಲ್ಲಿ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಪ್ರಯಾಣಿಸುತ್ತಿದ್ದ ವಾಹನಗಳಿಗೆ ಡಂಪರ್ ಟ್ರಕ್ವೊಂದು ನಿಯಂತ್ರಣ ತಪ್ಪಿ, ಡಿಕ್ಕಿ ಹೊಡೆದ ಪರಿಣಾಮ 14ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಐದು ಕಿ.ಮೀ.ವರೆಗೆ ರಭಸವಾಗಿ ವಾಹನಗಳನ್ನು ಡಿಕ್ಕಿ ಹೊಡೆದುಕೊಂಡು ಹೋದ ಟ್ರಕ್, ಐವತ್ತಕ್ಕೂ ಹೆಚ್ಚು ವಾಹನಗಳ ಜಖಂಗೆ ಕಾರಣವಾಗಿದೆ,(ಏಜೆನ್ಸೀಸ್).