

ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆಂಧ್ರಪ್ರದೇಶ ಮೂಲದ ಮೂವರು ಯುವಕರು ಮೃತಪಟ್ಟಿದ್ದಾರೆ.
ಮಾರತ್ತಹಳ್ಳಿ ರೈಲ್ವೆ ಸೇತುವೆ ಸಮೀಪದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಮಸಮುದ್ರ ಮಂಡಲ್ ಮೂಲದ ಬಾಲಸುಬ್ರಹ್ಮಣ್ಯಂ(೨೨), ಲೋಕೇಶ್(೨೦) ಮತ್ತು ಸಿ.ಶಶಿಕುಮಾರ್(೨೦) ಮೃತ ಯುವಕರು.
ಮೃತರ ಪೈಕಿ ಶಶಿಕುಮಾರ್ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ. ಲೋಕೇಶ್ ಕೆಲ ತಿಂಗಳಿಂದ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಬಾಲಸುಬ್ರಹ್ಮಣ್ಯಂ ಪದವಿ ವ್ಯಾಸಂಗ ಮಾಡಿದ್ದು, ಹೊಸ ಕೋರ್ಸ್‌ಗೆ ಸೇರಲು ನಗರಕ್ಕೆ ಬಂದಿದ್ದಾನೆ ಎಂಬುದು ಗೊತ್ತಾಗಿದೆ. ಮೂವರು ಮಾರತ್ತಹಳ್ಳಿಯ ಪಿಜಿಯಲ್ಲಿ ವಾಸವಾಗಿದ್ದರು. ಒಂದೇ ಊರಿನವರಾಗಿದ್ದರಿಂದ ಪರಸ್ಪರ ಸ್ನೇಹಿತರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ರಮ ಪ್ರವೇಶವೇ ಘಟನೆಗೆ ಕಾರಣ!:
ರಾತ್ರಿ ೯.೪೫ಕ್ಕೆ ಯಶವಂತಪುರದಿಂದ ಕಣ್ಣೂರಿಗೆ ಹೊರಡುವ ಕಣ್ಣೂರು ಎಕ್ಸ್‌ಪ್ರೆಸ್ ರೈಲು ೧೦.೨೦ ರ ಸುಮಾರಿಗೆ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ತಲುಪಿ ಮುಂದೆ ಸಾಗುತ್ತಿತ್ತು. ಇದೇ ವೇಳೆ ಮೂವರು ಯುವಕರು ಮಾರತ್ತಹಳ್ಳಿ ರೈಲ್ವೆ ಸೇತುವೆ ಬಳಿ ರೈಲು ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುಮಾರು ಹತ್ತಾರು ಅಡಿಗಳ ದೂರಕ್ಕೆ ಹಾರಿದ ಮೂವರು ಕೆಳಗೆ ಬಿದ್ದು, ತಲೆ ಹಾಗೂ ದೇಹದ ಕೆಲ ಭಾಗಗಳಿಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೈಲಿನ ಲೋಕೋಪೈಲೆಟ್ ನೀಡಿದ ಮಾಹಿತಿ ಪ್ರಕಾರ, ರೈಲು ಹಳಿ ಮೇಲೆ ಅಕ್ರಮ ಪ್ರವೇಶವೇ ಘಟನೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಡರಾತ್ರಿಯೇ ರೈಲ್ವೆ ಹಳಿ ಬಳಿ ಶೋಧಿಸಲಾಗಿತ್ತು. ಆದರೆ, ಯಾವುದೇ ಮೃತದೇಹಗಳು ಪತ್ತೆಯಾಗಲಿಲ್ಲ. ಗುರುವಾರ ಮುಂಜಾನೆ ಮತ್ತೊಮ್ಮೆ ಮೃತದೇಹಗಳ ಪತ್ತೆ ಕಾರ್ಯ ಆರಂಭಿಸಿದಾಗ ಸಾರ್ವಜನಿಕರು ಮೃತದೇಹಗಳ ಕಂಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಒಂದೊಂದು ಮೃತದೇಹಗಳ ಒಂದೊಂದು ಕಡೆ ಬಿದ್ದಿದ್ದವು. ಇದು ಆಕಸ್ಮಿಕ ಘಟನೆಯೋ ಅಥವಾ ಆತ್ಮಹತ್ಯೆಯೋ ಎಂಬ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಭೇಟಿ ರೈಲ್ವೆ ಎಸ್ಪಿ ಡಾ ಸೌಮ್ಯಲತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.