

ಬೆಂಗಳೂರು: ಪಾದರಾಯನಪುರದಲ್ಲಿ ಕರೊನಾ ವಾರಿಯರ್ಸ್ ಮೇಲೆ ಹಲ್ಲೆ, ಕೊಲೆ ಯತ್ನ ನಡೆಸಿದ ಪ್ರಕರಣದಲ್ಲಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಬಂಧಿತ ಹಲ್ಲೆಕೋರರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಇರ್ಫಾನ್ ಸೇರಿ 20ಕ್ಕೂ ಅಧಿಕ ದುಷ್ಕರ್ವಿುಗಳಿಗಾಗಿ ಬಲೆ ಬೀಸಲಾಗಿದೆ.
ಏ.19 (ಭಾನುವಾರ) ರಾತ್ರಿ ಕ್ವಾರಂಟೈನ್ಗೆ ಕರೊನಾ ಶಂಕಿತರನ್ನು ಕರೆತರಲು ಹೋಗಿದ್ದ ಪೊಲೀಸರು, ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ದುಷ್ಕರ್ವಿುಗಳು ಹಲ್ಲೆ ನಡೆಸಿದ್ದರು. ಈ ಕೇಸಿನಲ್ಲಿ 134 ಆರೋಪಿಗಳನ್ನು ಬಂಧಿಸಲಾಗಿತ್ತು. ಗುರುವಾರ ಮೂವರನ್ನು ಬಂಧಿಸಲಾಗಿದೆ. ಇವರಿಗೆ ಕೋವಿಡ್-19 ಪರೀಕ್ಷೆ ನಡೆಸಿ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗುತ್ತದೆ.
ಕಸ್ಟಡಿಯಲ್ಲಿ ಇರುವ ದುಷ್ಕರ್ವಿುಗಳ ವಿಚಾರಣೆ ವೇಳೆ ಕೆಲ ಮಾಹಿತಿ ಲಭ್ಯವಾಗಿದ್ದು, 20ಕ್ಕೂ ಅಧಿಕ ಮಂದಿ ತಲೆಮರೆಸಿಕೊಂಡಿದ್ದಾರೆ. ಮೊಬೈಲ್ ನೆಟ್ವರ್ಕ್ ಮಾಹಿತಿ ಪಡೆದಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾದರಾಯನಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಸೀಲ್ಡೌನ್ ಗಡಿದಾಟಿ ಯಾರೂ ಹೊರಗೆ ಬರಲು ಅವಕಾಶ ನೀಡುತ್ತಿಲ್ಲ. ಹೊರಬರಬೇಕಾದರೆ ಅಧಿಕಾರಿಗಳ ಅನುಮತಿ ಕಡ್ಡಾಯ ಮಾಡಲಾಗಿದೆ. ಪ್ರತಿಯೊಬ್ಬರ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ.
ಕಮಿಷನರ್ ನಗರ ಪ್ರದಕ್ಷಿಣೆ
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುರುವಾರ ರಾಜಧಾನಿ ಪ್ರದಕ್ಷಿಣೆ ಮಾಡಿದರು. ಕೆಲ ಚೆಕ್ಪೋಸ್ಟ್ಗೆ ಭೇಟಿ ಕೊಟ್ಟು ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲನೆ ನಡೆಸಿದರು. ಅನಗತ್ಯವಾಗಿ ಓಡಾಡುವ ವಾಹನ ಚಾಲಕ/ಸವಾರರಿಗೆ ಎಚ್ಚರಿಕೆ ಕೊಡುತ್ತಿದ್ದ ದೃಶ್ಯ ಕಂಡುಬಂತು.