

ಇಂದೋರ್: ವಾಹನಗಳನ್ನು ಧ್ವಂಸಗೊಳಿಸಿದ ಮೂವರು ಯುವಕರಿಗೆ ಮಧ್ಯಪ್ರದೇಶದ ಇಂದೋರ್ ನಗರದ ಪೊಲೀಸ್ ಆಯುಕ್ತರ ನ್ಯಾಯಾಲಯವು ಒಂದು ವರ್ಷದವರೆಗೆ ಮದ್ಯ ಮತ್ತು ಮಾದಕವಸ್ತು ಸೇವನೆಯಿಂದ ದೂರವಿರಲು ನಿರ್ದೇಶನ ನೀಡಿದೆ.
ಜೀತ್ ಚೌಹಾಣ್ ಅಲಿಯಾಸ್ ಆಲೂ (19), ರಾಜ್ ಕರೋಲೆ (19) ಮತ್ತು ಸೌರಭ್ ತಿಲ್ವೆ (23) ವಿರುದ್ಧ ಮಧ್ಯಪ್ರದೇಶ ರಾಜ್ಯ ಭದ್ರತಾ ಕಾಯ್ದೆ 1990 ರ ಅಡಿಯಲ್ಲಿ ಪೊಲೀಸ್ ಆಯುಕ್ತ ಮಕ್ರಾಂದ್ ದೇವಸ್ಕರ್ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
ಮುಂದಿನ 21 ದಿನಗಳ ಕಾಲ ಲಾಸುಡಿಯಾ ಪ್ರದೇಶದ ಖಾಲ್ಸಾ ಚೌಕದಲ್ಲಿ ಪ್ರತಿದಿನ ರಾತ್ರಿ 9 ರಿಂದ 11 ರವರೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಈ ಮೂವರಿಗೆ ಆದೇಶದಲ್ಲಿ ನಿರ್ದೇಶಿಸಲಾಗಿದೆ.
ಈ ಮೂವರು ಕೆಲವು ದಿನಗಳ ಹಿಂದೆ ಲಾಸುಡಿಯಾ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳ ಕಿಟಕಿಗಳನ್ನು ಕಲ್ಲೆಸೆದು ಒಡೆದಿದ್ದರು. ಅದಲ್ಲದೇ ಇವರು ಈ ಕೃತ್ಯವನ್ನು ಚಿತ್ರೀಕರಿಸಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸೂರಜ್ ವರ್ಮಾ ಶುಕ್ರವಾರ ತಿಳಿಸಿದ್ದಾರೆ.
"ಈ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಆರೋಪಿಗಳು ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಈ ಆದೇಶವನ್ನು ಹೊರಡಿಸಲಾಗಿದೆ " ಎಂದು ವರ್ಮಾ ಹೇಳಿದರು. (ಏಜೆನ್ಸೀಸ್)