ಒಂದೇ ಕುಟುಂಬದ ಮೂವರ ಹತ್ಯೆ!; ಮನೆಗಳಿಗೆ ಬೆಂಕಿಯಿಟ್ಟ ಗ್ರಾಮಸ್ಥರು

Untitled design - 2023-09-15T104957.720
Published on

ಉತ್ತರಪ್ರದೇಶದ: ಗುರುವಾರ (ಸೆ.14) ತಡರಾತ್ರಿ ಒಂದೇ ಕುಟುಂಬದ ಮೂವರನ್ನು ಕಿಡಿಗೇಡಿಗಳು ಗುಂಡಿಟ್ಟು ಹತ್ಯೆಗೈದ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಮೊಹಿಯುದ್ದೀನ್‌ಪುರ ಗ್ರಾಮದಲ್ಲಿ ವರದಿಯಾಗಿದೆ.

ತಂದೆ, ಮಗಳು ಹಾಗೂ ಅಳಿಯನನ್ನು ಗುಂಡಿಕ್ಕಿ ಹತ್ಯೆಗೈದ ಕಿಡಿಗೇಡಿಗಳು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಊರಿನ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಸಂದೀಪನ್ ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೌಶಂಬಿ ಜಿಲ್ಲೆಯ ಮೊಹಿಯುದ್ದೀನ್‌ಪುರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರ ಹತ್ಯೆಯ ಹಿಂದೆ ಜಮೀನು ವಿವಾದದ ಸಂಘರ್ಷವೇ ಕಾರಣ ಎಂದು ತಿಳಿಸಿದೆ. ಸದ್ಯ ಇಲ್ಲಿಯವರೆಗೂ ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ಬಂಧಿಸಿಲ್ಲ.

ಕಿಡಿಗೇಡಿಗಳು ಹತ್ಯೆಗೈದ ಘಟನೆ ತಿಳಿದ ಗ್ರಾಮಸ್ಥರು, ಸಂತ್ರಸ್ತರ ಶವಗಳನ್ನು ನೋಡಿ ಕುಪಿತಗೊಂಡು ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್​ ಇಲಾಖೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.

"ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಹೆಸರುಗಳು ಕೇಳಿಬಂದಿವೆ. ಈಗ ಅವರು ತಲೆಮರೆಸಿಕೊಂಡಿದ್ದಾರೆ, ಶೀಘ್ರವೇ ಅವರನ್ನು ಹುಡುಕಿ, ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಿದ್ದೇವೆ" ಎಂದು ಕೌಶಂಬಿಯ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಶ್ರೀವಾಸ್ತವ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net