ಕರೊನಾ ಮಧ್ಯೆ ಬ್ರಿಟನ್​ನಲ್ಲಿ ಲಸ್ಸಾ ಜ್ವರಕ್ಕೆ ಮೂವರ ಬಲಿ: ಸಾಂಕ್ರಾಮಿಕವಾಗಿ ಪಸರಿಸುವ ಸಾಧ್ಯತೆ; ತಜ್ಞರ ಎಚ್ಚರಿಕೆ

Nation
Published on

ಲಂಡನ್: ಕೋವಿಡ್ ಹಾವಳಿ ಮುಂದುವರಿದಿರುವಾಗಲೇ ಬ್ರಿಟನ್​ನಲ್ಲಿ ಮಾರಕ ರಕ್ತಸ್ರಾವ ಜ್ವರ ಲಸ್ಸಾ ಮೂವರನ್ನು ಬಲಿ ತೆಗೆದುಕೊಂಡಿದೆ. ಎಬೋಲಾ ರೀತಿಯಲ್ಲೇ ತೀವ್ರವಾದ ವೈರಾಣು ಸೋಂಕು ಇದಾಗಿದೆ ಎಂದು ಬ್ರಿಟನ್​ನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಲಸ್ಸಾ ‘ಸಾಂಕ್ರಾಮಿಕವಾಗುವ ಸಾಧ್ಯತೆಯೂ’ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸೋಂಕಿತ ಇಲಿಗಳ ಮಲ ಅಥವಾ ಮೂತ್ರ ಬಿದ್ದ ಆಹಾರವನ್ನು ಸೇವಿಸಿದ ಮಾನವರಿಗೂ ಸೋಂಕು ಹರಡುತ್ತದೆ. ಪ್ರಾಣಿಗಳು ಮತ್ತು ಜನರ ನಡುವೆ ಹರಡಬಹುದಾದ (ಝುೂನೊಟಿಕ್) ಈ ರೋಗ ಪಶ್ಚಿಮ ಆಫ್ರಿಕಾದ ಹಲವು ಭಾಗಗಳಲ್ಲಿ ಸ್ಥಳೀಯವಾಗಿ ಕಾಡುವ (ಎಂಡೆಮಿಕ್) ವ್ಯಾಧಿಯಾಗಿದೆ ಎಂದು ಅಮೆರಿಕದ ವ್ಯಾಧಿ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ತಿಳಿಸಿದೆ. ಈ ರೋಗ 1969ರಲ್ಲಿ ಮೊದಲ ಬಾರಿಗೆ ನೈಜೀರಿಯಾದ ಲಸ್ಸಾ ಪಟ್ಟಣದಲ್ಲಿ ಪತ್ತೆಯಾಗಿತ್ತು. ಹಾಗಾಗಿ ರೋಗಕ್ಕೆ ಲಸ್ಸಾ ಜ್ವರ ಎಂದು ಹೆಸರಿಡಲಾಗಿದೆ. ಪ್ರತಿ ವರ್ಷ 3 ಲಕ್ಷದಿಂದ 5 ಲಕ್ಷ ಜನರು ಲಸ್ಸಾ ಜ್ವರದಿಂದ ಬಳಲುತ್ತಾರೆ. ಸುಮಾರು 5,000 ಜನರು ಅದಕ್ಕೆ ಬಲಿಯಾಗುತ್ತಾರೆ.

ವಿದೇಶದಿಂದ ಬಂದ ಸೋಂಕು: ಕಳೆದೊಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಲಸ್ಸಾ ಸೋಂಕು ವಿದೇಶದಿಂದ ಬ್ರಿಟನ್​ಗೆ ಬಂದಿದೆ ಎಂದು ಬ್ರಿಟನ್ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್​ಎಸ್​ಎ) ಹೇಳಿದೆ. 1980ರಿಂದೀಚೆಗೆ ಬ್ರಿಟನ್​ಗೆ ಎಂಟು ಲಸ್ಸಾ ಪ್ರಕರಣ ಬಂದಿವೆ. ಈಗ ದೇಶದಲ್ಲಿ ಎರಡು ದೃಢಪಟ್ಟ ಹಾಗೂ ಒಂದು ಶಂಕಿತ ಕೇಸ್​ಗಳಿವೆ. ಈ ಮೂರೂ ರೋಗಿಗಳು ಒಂದೇ ಕುಟುಂಬದವರಾಗಿದ್ದು ಪ.ಆಫ್ರಿಕಾದಿಂದ ಇತ್ತೀಚೆಗೆ ಮರಳಿದ್ದರು.

ರೋಗ ಲಕ್ಷಣಗಳು: ಒಸಡು, ಕಣ್ಣು ಅಥವಾ ಮೂಗಿನಲ್ಲಿ ರಕ್ತಸ್ರಾವ, ಉಸಿರಾಟಕ್ಕೆ ತೊಂದರೆ, ಪದೇ ಪದೇ ವಾಂತಿ, ಮುಖ ಊದುವಿಕೆ, ಎದೆ, ಬೆನ್ನು ಅಥವಾ ಹೊಟ್ಟೆಯಲ್ಲಿ ನೋವು ಮತ್ತು ಆಘಾತ (ಶಾಕ್).

ಲಸಿಕೆ ನಂತರ ವ್ಯಾಯಾಮದಿಂದ ಪ್ರತಿಕಾಯ ಹೆಚ್ಚಳ: ಫ್ಲೂ ಅಥವಾ ಕೋವಿಡ್ ವ್ಯಾಕ್ಸಿನ್ ಪಡೆದ ನಂತರ 90 ನಿಮಿಷ ಕಾಲ ಸೌಮ್ಯ ಅಥವಾ ಮಧ್ಯಮ ಪ್ರಮಾಣದ ವ್ಯಾಯಾಮ ನಡೆಸಿದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚುವ ಸಂಭವವಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ‘ಬ್ರೇಯ್್ನ ಬಿಹೇವಿಯರ್ ಆಂಡ್ ಇಮ್ಯುನಿಟಿ’ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಒಂದು ಹಂತದ ಫಿಟ್ನೆಸ್ ಹೊಂದಿರುವ ಜನರಿಗೆ ಈ ಅಧ್ಯಯನ ವರದಿಯಿಂದ ನೇರವಾಗಿ ಪ್ರಯೋಜನ ಆಗಲಿದೆ ಎಂದು ಹೇಳಲಾಗಿದೆ. ಲಸಿಕೆ ಪಡೆದ ನಂತರ ಒಂದುವರೆ ಗಂಟೆ ಕಾಲ ನಿಂತಲ್ಲೇ ಸೈಕಲ್ ತುಳಿದ ಅಥವಾ ವೇಗವಾಗಿ ನಡೆದ ಜನರಲ್ಲಿ ಹಾಗೆ ಮಾಡದವರಿಗಿಂತ ಅಧಿಕ ಪ್ರಮಾಣದಲ್ಲಿ ಪ್ರತಿಕಾಯಗಳು ಉತ್ಪನವಾಗಿವೆ ಎಂದು ಅಧ್ಯಯನ ಕಂಡುಕೊಂಡಿದೆ.

ಕೆನಡಾದಲ್ಲಿ ತುರ್ತು ಸ್ಥಿತಿ: ಕರೊನಾ ನಿಯಂತ್ರಣ ಕ್ರಮಗಳನ್ನು ವಿರೋಧಿಸಿ ಕೆನಡಾದಲ್ಲಿ ಟ್ರಕ್ ಚಾಲಕರು ಮತ್ತಿತರರು ನಡೆಸುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ ಚಳವಳಿಯನ್ನು ಹತ್ತಿಕ್ಕಲು ಪ್ರಧಾನಿ ಜಸ್ಟಿನ್ ಟ್ರೂಡೊ ತುರ್ತು ಪರಿಸ್ಥಿತಿಯ ಅಧಿಕಾರವನ್ನು ಬಳಸಲು ಮುಂದಾಗಿದ್ದಾರೆ. ಪ್ರತಿಭಟನಾಕಾರರು ರಾಜಧಾನಿ ಒಟ್ಟಾವಾದಲ್ಲಿ ಜನಜೀವನ ಸ್ತಬ್ಧಗೊಳ್ಳುವಂತೆ ಮಾಡಿದ್ದು ಗಡಿ ದಾಟುವವರನ್ನು ತಡೆಹಿಡಿದು ಪರಿಸ್ಥಿತಿ ವಿಕೋಪಕ್ಕೆ ಹೋಗುವಂತೆ ಮಾಡಿದ್ದಾರೆ.

ಎಂಡೆಮಿಕ್ ಬಗ್ಗೆ ತಜ್ಞರ ಅಭಿಮತ: ಕರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ 4 ವಾರ ಕಾಲ ಕಡಿಮೆಯಾದ ನಂತರ ಸೋಂಕು ಎಂಡೆಮಿಕ್ (ಸ್ಥಳೀಯ ವ್ಯಾಧಿ) ಹಂತ ಪ್ರವೇಶಿಸಿದೆ ಎಂದು ಪರಿಗಣಿಸಬಹುದು ಎಂದು ವೈರಾಣು ತಜ್ಞ ಟಿ. ಜೇಕಬ್ ಜಾನ್ ಅಭಿಪ್ರಾಯ ಪಟ್ಟಿದ್ದಾರೆ.

30 ಸಾವಿರಕ್ಕಿಂತ ಕಡಿಮೆ ಕೇಸ್: ಭಾರತದಲ್ಲಿ ಸೋಂಕಿನ 3ನೇ ಅಲೆ ಇಳಿಮುಖ ವಾಗುತ್ತಿದೆ. ಮಂಗಳವಾರ ದೇಶದಾದ್ಯಂತ ಸೋಂಕಿನ 27,409 ಹೊಸ ಕೇಸ್​ಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 4,26,92,943ಕ್ಕೆ ಏರಿದೆ. 347 ಜನರು ಮೃತಪಟ್ಟಿದ್ದು ಬಲಿಯಾದವರ ಸಂಖ್ಯೆ 5,09,358 ಆಗಿದೆ. ದೈನಿಕ ಸೋಂಕಿನ ಪ್ರಕರಣಗಳು ಸತತ 9ನೇ ದಿನವೂ ಒಂದು ಲಕ್ಷಕ್ಕಿಂತ ಕಡಿಮೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net