

ಮೈಸೂರು: ಕನ್ನಡ ಚಿತ್ರರಂಗ ಎಂದಾಕ್ಷಣ ಅದರಲ್ಲೂ ನಿರ್ದೇಶನದ ವಿಚಾರ ಬಂದಾಗ ಮೊದಲು ನೆನಪಾಗುವ ಹೆಸರೇ ಪುಟ್ಟಣ್ಣ ಕಣಗಾಲ್ ಅವರದ್ದು.
ಚಂದನವನದ ಅಪ್ರತಿಮ ನಿರ್ದೇಶಕರಾಗಿದ್ದ ಅವರು ಅದ್ಭುತ ಎನಿಸುವಂಥ ಸಿನಿಮಾಗಳನ್ನಷ್ಟೇ ಕೊಟ್ಟಿಲ್ಲ, ಜೊತೆಗೆ ಮರೆಯಲಾಗದ ಮಾಣಿಕ್ಯದಂಥ ಅದ್ಭುತ ಕಲಾವಿದರನ್ನೂ ಕೊಟ್ಟಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್ ಮುಂತಾದ ಘಟಾನುಘಟಿಗಳೆಲ್ಲ ಅವರು ಪರಿಚಯಿಸಿದ್ದ ಕಲಾವಿದರೇ.
ಆದರೆ ಅಂಥ ಧೀಮಂತ ನಿರ್ದೇಶಕರ ಮನೆ ಇಂದು ತೀರಾ ದುಸ್ಥಿತಿಯಲ್ಲಿದೆ. ಶಿಥಿಲಗೊಂಡಿರುವ ಈ ಮನೆ ಯಾವಾಗ ಬೇಕಿದ್ದರೂ ಬಿದ್ದು ನೆಲಸಮವಾಗಬಹುದು ಎಂಬಂತಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಇರುವ ಈ ಮನೆಯ ಚಿತ್ರಗಳನ್ನು ಪವನ್ ಕುಮಾರ್ ಎಂಬ ಟೆಕ್ಕಿಯೊಬ್ಬರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈ ಕುರಿತು ತಕ್ಷಣದ ಕ್ರಮ ಅಗತ್ಯವಿದೆ ಎಂದು ಹೇಳಿಕೊಳ್ಳುವ ಮೂಲಕ ಕಾಳಜಿ ತೋರಿದ್ದಾರೆ.