

ಮಣಿಪುರ: ಗಲಭೆ ಪೀಡಿತ ಮಣಿಪುರದಲ್ಲಿ ರಕ್ತಪಾತ ಮುಂದುವರೆದಿದ್ದು, ಉಖ್ರುಲ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಕುಕಿ ಸಮುದಾಯಕ್ಕೆ ಸೇರಿದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.
ಕುಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಉಖ್ರುಲ್ ಜಿಲ್ಲೆಯ ಥೋವೈ ಕುಕಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ಏಕಾಏಕಿ ಹಳ್ಳಿಗೆ ನುಗ್ಗಿ ಮೂವರ ಮೇಲೆ ದಾಳಿ ನಡೆಸಿದ್ದಾರೆ. ಮೃತರು ತಮ್ಮ ಹಳ್ಳಿಯ ಮೇಲೆ ಮೈತೇಯಿ ಸಮುದಾಯದವರು ನಡೆಸಲು ಉದ್ದೇಶಿಸಿದ ದಾಳಿಯನ್ನು ವಿಫಲಗೊಳಿಸಲು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಗ್ಶೆಂ ವಶುಂ ಘಟನೆಯೂ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದೆ. ವಿಚಾರ ತಿಳಿದು ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳುವ ವೇಳೆಗಾಗಲೇ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳ ಹುಡುಕಾಟಕ್ಕೆ ತಂಡವನ್ನು ರಚಿಸಲಾಗಿದೆ.
ನಾಗಾ ಸಮುದಾಯದವರು ಹೆಚ್ಚಾಗಿ ವಾಸಿಸುವ ಉಖ್ರುಲ್ ಜಿಲ್ಲೆಯಲ್ಲಿ ಕುಕಿ-ಮೈತೇಯಿ ಹಿಂಸಾಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಆರೋಪಿಗಳು ಮೂವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಶಂಕಿತ ಆರೋಪಿಗಳು ಮೈತೇಯಿ ಸಮುದಾಯದವರಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಗ್ಶೆಂ ವಶುಂ ಹೇಳಿದ್ದಾರೆ.
ಮೇ 3ರಂದು ಮೈತೇಯಿ-ಕುಕಿ ಸಮುದಾಯದ ನಡುವೆ ಸಂಭವಿಸಿದ ಜನಾಂಗೀಯ ಘರ್ಷಣೆಯಲ್ಲಿ 60 ಸಾವಿರಕ್ಕೂ ಹೆಚ್ಚಿನ ಜನರು ಆಶ್ರಯ ಕಳೆದುಕೊಂಡಿದ್ದು, 160ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ.