

ಬಾಗೇಪಲ್ಲಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ
ಬಾಗೇಪಲ್ಲಿ ಮೂಲದ ಮೂವರು ಮೃತಪಟ್ಟಿದ್ದಾರೆ.
ಪಟ್ಟಣದ 7ನೇ ವಾರ್ಡ್ನ ಕೇಬಲ್ ಆಪರೇಟರ್ ನರಸಿಂಹರೆಡ್ಡಿ ಅವರ ಪುತ್ರ ಮೇರ್ಷ್(17), ಬಾಗೇಪಲ್ಲಿ ಪಟ್ಟಣದ ಗೀತಾಮಂದಿರ ರಸ್ತೆಯ ನಿವಾಸಿ ಶ್ರಾವಣಿ (28) ಹಾಗೂ ತಾಲೂಕಿನ ಹೊಸಹುಡ್ಯ ಗ್ರಾಮದ ಎಚ್.ಟಿ.ಶಿವಪ್ಪ ಅವರ ಪುತ್ರ ಎಚ್.ಎಸ್.ಚರಣ್ (17) ಮೃತರು. ಚಾಲಕ ಮಂಜುನಾಥ್ ಸೇರಿ 11 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮೇರ್ಷ್ ಮತ್ತು ಚರಣ್ ಪಟ್ಟಣದ ವಿ.ಆರ್. ಅಕಾಡೆಮಿ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಸಾವಿನ ಸುದ್ದಿ ತಿಳಿದು ಕಾಲೇಜು ಆವರಣದಲ್ಲಿ ಸ್ನೇಹಿತರ ದುಖಃ ಮಡುಗಟ್ಟಿತ್ತು.
ಕೇಬಲ್ ಆಪರೇಟರ್ ನರಸಿಂಹಾರೆಡ್ಡಿ, ಹೊಸಹುಡ್ಯ ಗ್ರಾಮದ ಟೋಲ್ಗೇಟ್ ಸಿಬ್ಬಂದಿ ಎಚ್.ಟಿ. ಶಿವಪ್ಪ ಹಾಗೂ ಗೀತಾಮಂದಿರ ರಸ್ತೆಯ ಚಂದ್ರಪ್ಪ ಕುಂಟುಂಬದ 13 ಸದಸ್ಯರು ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಖಾಸಗಿ ವಾಹನದಲ್ಲಿ ತೆರಳಿದ್ದರು. ದರ್ಶನದ ನಂತರ ಬಾಗೇಪಲ್ಲಿಗೆ ವಾಪಸಾಗುತ್ತಿದ್ದಾಗ ಸೋಮವಾರ ಬೆಳಗಿನ ಜಾವ ಆಂಧ್ರದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಕುರುಬಲಕೋಟ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅವಡ ಸಂಭವಿಸಿದೆ.
ಗಾಯಾಳುಗಳಿಗೆ ಮದನಪಲ್ಲಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಹಾಗೂ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮದನಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿ ಹೊಡೆದ ವಾಹನದ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.