ಲಾಕ್​ಡೌನ್​ನಲ್ಲಿ 46 ಉಗ್ರರ ಹೊಡೆದುರುಳಿಸಿದ ಸೇನೆ: ಇಂದು ಮೂವರ ಹತ್ಯೆ

terroristweb
ಸಾಂದರ್ಭಿಕ ಚಿತ್ರ
Published on

ಪುಲ್ವಾಮಾ: ಕರೊನಾ ವೈರಸ್​ಗಿಂತಲೂ ಭೀಕರವಾಗಿ ಉಗ್ರರು ಭಾರತದ ಮೇಲೆ ಸಂಚು ರೂಪಿಸುತ್ತಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನದ ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗುತ್ತಲೇ ಬಂದಿದೆ.

ಲಾಕ್​ಡೌನ್​ ಅವಧಿ ಶುರುವಾದ ದಿನದಿಂದ ಇಲ್ಲಿಯವರೆಗೆ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ 44 ಭಯೋತ್ಪಾದಕರು ಮತ್ತು ಇಬ್ಬರು ಸಹಚರರನ್ನು ಹೊಡೆದುರುಳಿಸಿದೆ.

ಆದರೂ ಪಟ್ಟು ಬಿಡದ ಉಗ್ರರು ದಾಳಿಯನ್ನು ಮುನ್ನಡೆಸುತ್ತಲೇ ಇದ್ದು, ಇಂದು ಬೆಳಗ್ಗೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಜೈಷ್​-ಎ-ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದ್ದ ಮೂವರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ನಿನ್ನೆಯಷ್ಟೇ (ಮಂಗಳವಾರ) ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಇದಕ್ಕೂ ಮುನ್ನ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಅವರು ಭಾರತಕ್ಕೆ ನುಸುಳಲು ಪ್ರಯತ್ನಿಸಿದ್ದರು. ಆದರೆ ಕಲಾಲ್ ಗ್ರಾಮದ ಬಳಿ ಭದ್ರತಾ ಪಡೆಗಳು ಅವರನ್ನು ಹೊಡೆದುರುಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪುಲ್ವಾಮಾದ ಕಂಗನ್ ಮುರ್ರನ್ ಪ್ರದೇಶದಲ್ಲಿ ಭದ್ರತಾ ಪಡೆ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಮೂವರು ಹತರಾಗಿದ್ದಾರೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರು ದಕ್ಷಿಣ ಕಾಶ್ಮೀರದ ಪುಲ್ವಾಮಾದ ಕಂಗನ್ ಮುರ್ರನ್ ಗ್ರಾಮದಲ್ಲಿ ನಿರ್ದಿಷ್ಟ ಮಾಹಿತಿಯನ್ನು ಕಲೆ ಹಾಕಿದ್ದರು. ಉಗ್ರರ ಇರುವಿಕೆ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಉಗ್ರರು ಭದ್ರತಾ ಪಡೆ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಲಾರಂಭಿಸಿದಾಗ ಎನ್​ಕೌಂಟರ್ ನಡೆದಿದೆ.

ಈ ಭಯೋತ್ಪಾದಕರಲ್ಲಿ ಒಬ್ಬಾತ ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಜೈಶ್‌ನ ಉನ್ನತ ಕಮಾಂಡರ್ ಆಗಿರಬಹುದು ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ವಾರಗಳಿಂದ, ಪೊಲೀಸರು ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾದ ಭಯೋತ್ಪಾದಕರ ಗುರುತುಗಳನ್ನು ಬಹಿರಂಗಪಡಿಸುತ್ತಿಲ್ಲ. ಕುಟುಂಬ ಸದಸ್ಯರಿಗೆ ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net