ಉ.ಪ್ರದೇಶದಲ್ಲಿ ದಾಖಲಾಗಿದ್ದ ಕೇಸಿನ ಜಾಡು ಹಿಡಿದು ಬಂದ ಎನ್‌ಐಎ ಬಲೆಗೆ ಮೂವರು ಅಕ್ರಮ ಬಾಂಗ್ಲಾ ಪ್ರಜೆಗಳು

NIA
Published on

ಬೆಂಗಳೂರು: ಅಪರಾಧ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ಕಾರ್ಯಾಚರಣೆ ವೇಳೆ ಮೂವರು ಅಕ್ರಮ ಬಾಂಗ್ಲಾ ಪ್ರಜೆಗಳು ಪತ್ತೆಯಾಗಿದ್ದು, ಬೆಳ್ಳಂದೂರು ಠಾಣೆಗೆ ಒಪ್ಪಿಸಿದ್ದಾರೆ.

ಬಾಂಗ್ಲಾದೇಶ ಮೂಲದ ಅಬ್ದುಲ್ ಖಾದರ್, ಖಲೀಲ್ ಚಪ್ರಾಸಿ ಮತ್ತು ಮೊಹಮ್ಮದ್ ಜಾಹೀದ್ ಬಂಧಿತರು. ಉತ್ತರ ಪ್ರದೇಶದಲ್ಲಿ ದಾಖಲಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಸೋಮವಾರ ಬೆಂಗಳೂರಿಗೆ ಭೇಟಿ ಕೊಟ್ಟು ದಾಳಿ ನಡೆಸಿದಾಗ ಈ ಮೂವರು ಪತ್ತೆಯಾಗಿದ್ದಾರೆ.

ವಿಚಾರಣೆ ವೇಳೆ ತಮ್ಮ ಕೇಸಿಗೆ ಸಂಬಂಧಪಟ್ಟವರು ಅಲ್ಲ ಎಂಬುದು ಗೊತ್ತಾಗಿದೆ. ಆದರೆ, ಮೂವರ ಬಳಿ ವೀಸಾ, ಪಾಸ್‌ಪೋರ್ಟ್ ಇರಲಿಲ್ಲ. ಆದರಿಂದ ಅಕ್ರಮ ವಾಸಿಗಳು ಎಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ಒಪ್ಪಿಸಿ ಎನ್‌ಐಎ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ ಎಂದು ವೈಟ್‌ಫೀಲ್ಡ್ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.

ಇದರಲ್ಲಿ ಅಬ್ದುಲ್ ಖಾದರ್ ಮತ್ತು ಖಲೀಲ್ ಚಪ್ರಾಸಿ 2012ರಲ್ಲಿ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದು ನೆಲೆಸಿದ್ದು, ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಮತ್ತೊಬ್ಬ 15 ದಿನಗಳ ಹಿಂದೆ ಬಂದಿದ್ದ. ಇವರನ್ನು ಎನ್‌ಐಎ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ತನಿಖೆಗೆ ಇವರ ಅವಶ್ಯಕತೆ ಇಲ್ಲದಿರುವುದರಿಂದ ಮತ್ತು ಅಕ್ರಮ ವಲಸಿಗರು ಎಂದು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದರ ಮೇರೆಗೆ ಪಾಸ್ ಪೋರ್ಟ್ ಕಾಯ್ದೆ ಮತ್ತು ವಿದೇಶಾಂಗ ಇಲಾಖೆ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಬಂಧಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net