ವಿಲೀನ ಪ್ರಕ್ರಿಯೆ ಚುರುಕು: 3 ಇಲಾಖೆಗಳ ಸೇರ್ಪಡೆ ಪ್ರಸ್ತಾವನೆ ಸಿದ್ಧ

vidhana soudha
Published on

ಬೆಂಗಳೂರು: ಆಡಳಿತದಲ್ಲಿ ಸುಧಾರಣೆ, ವೆಚ್ಚ ತಗ್ಗಿಸುವ ಗುರಿಯೊಂದಿಗೆ ಇಲಾಖೆಗಳ ವಿಲೀನ ಪ್ರಕ್ರಿಯೆ ಚುರುಕುಗೊಂಡಿದ್ದು, ಕರೊನಾ ತಂದೊಡ್ಡಿದ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ರಾಜ್ಯ ಸರ್ಕಾರ ಈ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಿದೆ. ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದು, ಇಲಾಖೆಗಳ ವಿಲೀನದ ಕುರಿತು ವರದಿ ಸಿದ್ಧಪಡಿಸುತ್ತಿದೆ. ಸದ್ಯಕ್ಕೆ 3 ಇಲಾಖೆಗಳನ್ನು ವಿಲೀನಗೊಳಿಸುವ ಪ್ರಸ್ತಾವನಯನ್ನು ಸಚಿವ ಸಂಪುಟ ಸಭೆ ಮುಂದಿಡಲು ತಯಾರಾಗಿದೆ. ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ ಮತ್ತು ಯುವಜನ ಸೇವೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳನ್ನು ಸೇರಿಸಿ ಒಂದೇ ಇಲಾಖೆಯಡಿ ತರಲಿದ್ದು, ಈ ಮೂರೂ ಇಲಾಖೆಗಳ ಜವಾಬ್ದಾರಿ ಇರುವ ಸಚಿವ ಸಿ.ಟಿ.ರವಿ ಸ್ವತಃ ಈ ಕುರಿತು ಮನವಿ ಸಲ್ಲಿಸಿದ್ದರು.

ಒಂದಾದ ಮಂಡಳಿ

ಪ್ರೌಢ ಮತ್ತು ಪಿಯು ಶೈಕ್ಷಣಿಕ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಮಂಡಳಿಗಳ ವಿಲೀನಕ್ಕೆ ಸರ್ಕಾರ ನಿರ್ಧರಿಸಿದೆ, ಎಸ್ಸೆಸ್ಸೆಲ್ಸಿ ಮತ್ತು ಪಿಯು ಮಂಡಳಿಯನ್ನು ವಿಲೀನಗೊಳಿಸಿ ಪ್ರಾಥಮಿಕ ಶಿಕ್ಷಣ ಪರಿಷತ್ ಎಂದು ಶೀಘ್ರ ಮರು ನಾಮಕರಣ ಮಾಡಲಿದೆ.

ಏಕರೂಪವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ರಾಜ್ಯ ಲೆಕ್ಕಪತ್ರ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ತೀರ್ವನಿಸಿದೆ. ಏಕರೂಪವಾಗಿ ಕರ್ತವ್ಯನಿರ್ವಹಿಸುವ ಇಲಾಖೆಗಳನ್ನು ವಿಲೀನಗೊಳಿಸಬೇಕು ಎಂಬ 6ನೇ ವೇತನ ಆಯೋಗದ 2ನೇ ವರದಿಯ ಶಿಫಾರಸಿನಂತೆ ಈ ಕ್ರಮಕ್ಕೆ ಮುಂದಾಗಿದೆ. ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ ಒಂದೇ ಇಲಾಖೆ ಅಸ್ತಿತ್ವಕ್ಕೆ ಬರಲಿದೆ.

ಆಕಾಂಕ್ಷಿಗಳಿಗೆ ಆತಂಕ

ಬೊಕ್ಕಸಕ್ಕೆ ಅನಗತ್ಯ ಹೊರೆ ತಪ್ಪಿಸಿ, ಆಡಳಿತದಲ್ಲಿ ದಕ್ಷತೆ ತರಲೆಂದು ಹಲವು ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಕೈಹಾಕಿದ್ದರೆ, ಹಲವು ಇಲಾಖೆಗಳು ಕಾರ್ಯಭಾರ ಹೆಚ್ಚುತ್ತದೆ ಎನ್ನುವ ಅಪಸ್ವರ ಎತ್ತಿವೆ. ಮತ್ತೊಂದೆಡೆ, ಸರ್ಕಾರಿ ಉದ್ಯೋಗಗಳ ಕಡಿತದ ಭೀತಿಯಿಂದಾಗಿ ಉದ್ಯೋಗಾಕಾಂಕ್ಷಿಗಳು ಈ ಕ್ರಮವನ್ನು ವಿರೋಧಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಉಲ್ಬಣಿಸುತ್ತಿರುವ ಸಂದರ್ಭದಲ್ಲಿ ಗುತ್ತಿಗೆ, ಹೊರಗುತ್ತಿಗೆ ಹೆಸರಿನಲ್ಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಬಹುತೇಕ ಕಡಿಮೆಯಾಗಿದೆ. ಇಲಾಖೆಗಳ ವಿಲೀನದಿಂದ ಮತ್ತಷ್ಟು ಉದ್ಯೋಗದ ಅವಕಾಶಗಳು ಕೈತಪ್ಪಲಿವೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net