

ಬೆಂಗಳೂರು: ಶಾಸಕರಾಗಿ ಸಂಸದರಾಗಿ ಆಯ್ಕೆಯಾದ ಎಚ್.ಡಿ. ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ತುಕಾರಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮುಕ್ತಾಯಗೊಂಡಿದ್ದು, ಮತದಾರರು ಅತೀವ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಮತದಾನ ಅಂತ್ಯವಾಗಿದ್ದು, ಅಭ್ಯರ್ಥಿಗಳ ಹಣೆ ಬರಹ ಇವಿಎಂಗಳಲ್ಲಿ ಲಾಕ್ ಆಗಿದೆ. ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಅಲ್ಲಿಯವರೆಗೂ ಕಾಯಬೇಕಿದೆ. 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿ ನೋಡುವುದಾದರೆ ಈ ಬಾರಿ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣದಲ್ಲಿ ಬರೋಬ್ಬರಿ 88.80ರಷ್ಟು ಮತದಾನವಾಗಿದ್ದು, ಶಿಗ್ಗಾಂವಿಯಲ್ಲಿ 80.48ರಷ್ಟು ಮತದಾನವಾಗಿದೆ. ಎಸ್ಟಿ ಮೀಸಲು ಕ್ಷೇತ್ರ ಸಂಡೂರಿನಲ್ಲಿ 76.24 %ರಷ್ಟು ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದೆ.
ಮೂರೂ ಕ್ಷೇತ್ರಗಳಲ್ಲಿ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸಿರುವ ಕಾರಣ ಚುನಾವಣಾ ಕಣ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಣಕ್ಕಳಿದರೆ, ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ನಿಂದ ಯಾಸಿರ್ ಖಾನ್ ಪಠಾಣ್ ಸ್ಫರ್ಧಿಸಿದ್ದು, ಸಂಡೂರಿನಲ್ಲಿ ಸಂಸದ ತುಕಾರಂ ಅವರ ಪತ್ನಿ ಅನ್ನಪೂರ್ಣ ಕಾಂಗ್ರೆಸ್ನಿಂದ ಸ್ಫರ್ಧಿಸಿದ್ದಾರೆ. ಇವರ ವಿರುದ್ಧ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಅವರನ್ನು ಕಣಕ್ಕಿಳಿಸಿದೆ.