

ಬೆಂಗಳೂರು: ಚನ್ನಪಟ್ಟಣ, ಸೊಂಡೂರು ಮತ್ತು ಶಿಗ್ಗಾವಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆ ಆಗಬಹುದು. ಮೂರು ಉಪ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ, ಗೆಲ್ಲುವ ದೃಷ್ಟಿಯಿಂದ ವಿಶೇಷ ಪ್ರಯತ್ನ ಮಾಡಬೇಕು ಎಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸಂಕಲ್ಪ ಮಾಡಲಾಗಿದೆ ಎಂದು ಕಮಿಟಿ ಸದಸ್ಯರೂ ಆದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಕಮಿಟಿ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಸಂಬಂಧಿಸಿ ಎನ್‍ಡಿಎ ಮಿತ್ರ ಪಕ್ಷವಾದ ಜೆಡಿಎಸ್ ಮತ್ತು ನಮ್ಮ ಕೇಂದ್ರೀಯ ನಾಯಕರ ಜತೆ ಸಮಾಲೋಚನೆ ಮಾಡಿ, ನಿರ್ಣಯಿಸಲು ಕೋರ್ ಕಮಿಟಿ ನಿರ್ಧರಿಸಿದೆ.
ಈ ಹಿಂದೆ ಶ್ರೀನಿವಾಸ ಪೂಜಾರಿಯವರು ಚುನಾಯಿತರಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ಆ ಉಪ ಚುನಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೋಗಿ ಅಪೇಕ್ಷಿತರ ವರದಿ, 2 ಜಿಲ್ಲೆಗಳ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಬಂದಿದ್ದರು. ಇಲ್ಲಿ ಚರ್ಚಿಸಿದ್ದು, ಕೇಂದ್ರೀಯ ನಾಯಕತ್ವದ ಜತೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೊಡಲಾಗಿದೆ ಎಂದರು.
ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಚರ್ಚಿಸಲಾಗಿದೆ. ಈ ಸರ್ಕಾರದ ಮೇಲೆ ನಿರಂತರವಾಗಿ ಬರುತ್ತಿರುವ ಆಧಾರಸಹಿತವಾದ ಭ್ರಷ್ಟಾಚಾರದ ಆರೋಪಗಳು, ಅದರ ವಿರುದ್ಧ ಇನ್ನಷ್ಟು ಜನಾಂದೋಲನ ರೂಪಿಸುವ ಕುರಿತು ಚರ್ಚೆ ಮಾಡಿದ್ದೇವೆ. ಈ ಸರ್ಕಾರದ ಹಿಂದು ವಿರೋಧಿ ನೀತಿ, ಗಣೇಶೋತ್ಸವದ ಮೇಲೆ ನಿರ್ಬಂಧ ಹೇರುತ್ತಿರುವುದು, ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗದಳದ ಮುಖಂಡರ ಮೇಲೆ ದಿಗ್ಬಂಧನವನ್ನು ಹಾಕುತ್ತಿರುವುದು, ಓಲೈಕೆಯ ರಾಜಕಾರಣ ಕುರಿತು ಚರ್ಚಿಸಿದ್ದೇವೆ.
ಈ ಸಂಬಂಧ ಪರಿವಾರ ಸಂಘಟನೆಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಹೋರಾಟ ನಡೆಸುವ ಚಿಂತನೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ ಎಂದು ಸಿ.ಟಿ.ರವಿ ವಿವರಿಸಿದರು.
ಶಾಸಕ ಮುನಿರತ್ನ ಅವರ ಮೇಲೆ ಎಸ್‍ಐಟಿ ರಚನೆ ಮಾಡಿದ್ದಾರೆ. ಇಂಥದ್ದೇ ಆಪಾದನೆಗಳು ಕಾಂಗ್ರೆಸ್ ಶಾಸಕರ ಮೇಲೆ ಬಂದಾಗ ಅವರಿಗೆ ಒಂದು ನೀತಿ, ಬಿಜೆಪಿ ಶಾಸಕರಿಗೆ ಮತ್ತೊಂದು ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಸರಕಾರ ಪೂರ್ವಗ್ರಹ ಪೀಡಿತವಾಗಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸತ್ಯಾಸತ್ಯತೆ ತನಿಖೆ ನಡೆಸುವುದು ಬೇರೆ.
ಪೂರ್ವಾಗ್ರಹ, ರಾಜಕೀಯ ದ್ವೇಷದಿಂದ ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ನಡೆಸುವ ಸಂಚು ಬೇರೆ. ಈ ಸರಕಾರವು ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು ನಡೆಸುವುದು ವ್ಯಕ್ತವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ ಎಂದು ಮಾತನಾಡುವ ಇವರು ಸರ್ವಾಧಿಕಾರಿ, ಸಂವಿಧಾನಬಾಹಿರವಾಗಿ ದ್ವೇಷದ ನಡೆಯನ್ನು ತೋರುವ ಬಗ್ಗೆ ಚರ್ಚಿಸಿದ್ದೇವೆ ಎಂದು ಸಿ.ಟಿ.ರವಿ ತಿಳಿಸಿದರು.
ಈ ಸಭೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನಿಕಟಪೂರ್ವ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಪುದುಚೇರಿ ರಾಜ್ಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಅವರು ಪಾಲ್ಗೊಂಡಿದ್ದರು.