

ರಾಯಚೂರು: ಪಟಾಕಿ ಹೊಡೆಯುವುದನ್ನು ತಡೆಯಲು ಹೋದ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ ರಾಗಿಮನಗಡ್ಡದಲ್ಲಿ ನಡೆದಿದೆ. ಮೃತರನ್ನು ನರಸಿಂಹಲು(32) ಎಂದು ಗುರುತಿಸಲಾಗಿದ್ದು, ಹತ್ಯೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ (Arrest).
ಅಕ್ಟೋಬರ್ 31ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 31ರ ರಾತ್ರಿ ರಾಗಿಮನಗಡ್ಡದಲ್ಲಿ ವಾಸಿಸುವ ಕೆಲವು ಯುವಕರು ಹಬ್ಬದ ನಿಮಿತ ರಾತ್ರಿ ವೇಳೆ ಪಟಾಕಿ ಹೊಡೆಯುತ್ತಿದ್ದರು. ಈ ವೇಳೆ ನರಸಿಂಹುಲು ಮನೆ ಬಳಿ ಪಟಾಕಿ ಹೊಡೆದಿದ್ದಾರೆ. ನಮ್ಮ ಮನೆ ಮುಂದೆ ಯಾಕೆ ಪಟಾಕಿ ಹೊಡೆಯುತ್ತಿದ್ದಿರಿ ಅಂತ ನರಸಿಂಹುಲು ಪ್ರಶ್ನಿಸಿದ್ದಾರೆ. ಈ ವೇಳೆ ಯುವಕರಾದ ಪ್ರವೀಣ, ಚಿನ್ನು, ನಾಗು ನಡುವೆ ಮಾತಿನ ಚಕಮಕಿಯಾಗಿದ್ದು, ನರಸಿಂಹುಲು ಯುವಕರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಹಲ್ಲೆಗೊಳಗಾಗಿದ್ದ ಯುವಕರು ಸ್ನೇಹಿತರ ಜತೆಗೂಡಿ ನರಸಿಂಹುಲು ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನರಸಿಂಹುಲು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಯುವಕರು ಹಾಗೂ ನರಸಿಂಹನ ಕಡೆಯವರಿಂದ ದೂರು-ಪ್ರತಿದೂರು ದಾಖಲಾಗಿದೆ. ಪ್ರವೀಣ, ಚಿನ್ನು, ನಾಗು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.