

American women : ಮೂವರು ಅಮೆರಿಕನ್ ಯುವತಿಯರು ನಿಗೂಢವಾಗಿ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಮಧ್ಯ ಅಮೆರಿಕದ ಬೆಲೀಜ್ನಲ್ಲಿರುವ ಐಷಾರಾಮಿ ಬೀಚ್ ರೆಸಾರ್ಟ್‌ನಲ್ಲಿ ನಡೆದಿದೆ.
ಹೋಟೆಲ್ ರೂಮ್ನಲ್ಲಿ ಮೃತ ಮಹಿಳೆಯರ ಪಕ್ಕದಲ್ಲಿ ಆಲ್ಕೋಹಾಲ್ ಮತ್ತು ಕೆಲ ಗಮ್ಮೀಸ್ ಪತ್ತೆಯಾಗಿರುವುದರಿಂದ ಡ್ರಗ್ಸ್ ಓವರ್ಡೋಸ್ ಆಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಆದರೂ ಸಾವಿಗೆ ಕಾರಣ ಮಾತ್ರ ಇನ್ನೂ ನಿಗೂಢವಾಗೇ ಉಳಿದಿದೆ.
ಮೃತ ಮಹಿಳೆಯರನ್ನು ಕೌತರ್ ನಕ್ಕಾದ್ (23), ಇಮಾನೆ ಮಲ್ಲಾ (24) ಮತ್ತು ವಫೇ ಎಲ್-ಅರಾರ್ (26) ಎಂದು ಗುರುತಿಸಲಾಗಿದೆ. ಮೂವರು ಕೂಡ ಮ್ಯಾಸಚೂಸೆಟ್ಸ್ ರಾಜ್ಯದ ರೆವೆರೆ ನಗರದ ನಿವಾಸಿಗಳು. ಶನಿವಾರ, ಸ್ಯಾನ್ ಪೆಡ್ರೊದ ರಾಯಲ್ ಕಹಾಲ್ ಬೀಚ್ ರೆಸಾರ್ಟ್‌ನಲ್ಲಿ ಮೂವರೂ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ತಮ್ಮ ರೂಮಿಗೆ ಪ್ರವೇಶಿಸಿದ ಮಹಿಳೆಯರು ಒಂದು ಕ್ಷಣವೂ ರೂಮಿನಿಂದ ಹೊರಗೆ ಬಾರದಿದ್ದನ್ನು ರೆಸಾರ್ಟ್ ಸಿಬ್ಬಂದಿ ಸಿಸಿಟಿವಿಯಲ್ಲಿ ಗಮನಿಸಿದ್ದಾರೆ. ಬಳಿಕ ಅವರನ್ನು ಸಂಪರ್ಕಿಸಲು ರೆಸಾರ್ಟ್ ಸಿಬ್ಬಂದಿ ಹಲವು ಬಾರಿ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ಸಾಧ್ಯವಾಗಲಿಲ್ಲ. ಶನಿವಾರವೂ ಮಹಿಳೆಯರಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಹೋಟೆಲ್ ಸಿಬ್ಬಂದಿ ಕೋಣೆಯನ್ನು ತೆರೆದು ನೋಡಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೂವರು ಮಹಿಳೆಯರ ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಆದರೆ, ಆರಂಭದಲ್ಲಿ ಮಹಿಳೆಯ ಶವವನ್ನು ನೋಡಿದವರು ಅವರ ಬಾಯಿಯಲ್ಲಿ ನೊರೆ ಬರುತ್ತಿತ್ತು ಎಂದು ಹೇಳಿದ್ದಾರೆ. ಹೀಗಾಗಿ ಡ್ರಗ್ಸ್ ಓವರ್ಡೋಸ್ ಆಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಪೊಲೀಸರು ಘಟನಾ ಸ್ಥಳವನ್ನು, ಕೂಲಂಕಷವಾಗಿ ಪರಿಶೀಲಿಸಿದ್ದು, ಮದ್ಯದ ಬಾಟಲಿಗಳು ಮತ್ತು ಕೆಲವು ಗಮ್ಮಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳು ಅಲ್ಲಿ ಪತ್ತೆಯಾಗಿಲ್ಲ ಎಂದು ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ಹೇಳಿದ್ದಾರೆ ಎಂದು ಚಾನೆಲ್ 5 ಬೆಲೀಜ್ ವರದಿ ಮಾಡಿದೆ.
ಸದ್ಯದ ಸಮಯದಲ್ಲಿ ನಾವು ಗಮ್ಮಿಗಳು ಸಾವಿಗೆ ಕಾರಣವೆಂದು ಹೇಳಲಾಗುವುದಿಲ್ಲ. ಈ ವಿಚಾರದಲ್ಲಿ ನಾವು ಪ್ರತಿಯೊಂದು ಸಾಧ್ಯತೆಯನ್ನು ಕೂಡ ನೋಡುತ್ತಿದ್ದೇವೆ. ಮಹಿಳೆಯರು ಗಮ್ಮಿಗಳನ್ನು ಬೇರೆ ಕಡೆಯಿಂದ ತಂದಿದ್ದಾರೋ ಅಥವಾ ಸ್ಥಳೀಯವಾಗಿ ಖರೀದಿಸಿದ್ದಾರೋ ಎಂದು ತನಿಖೆ ನಡೆಸುತ್ತಿದ್ದೇವೆ. ಮಹಿಳೆಯರ ಮೇಲೆ ಯಾವುದೇ ಗಾಯಗಳಾಗಲಿ ಅಥವಾ ಕುರುಹುಗಳಾಗಲಿ ಪತ್ತೆಯಾಗಿಲ್ಲ. ರೂಮಿನಲ್ಲಿ ತಿಂಡಿಗಳು, ದ್ರವಗಳು, ವೇಪ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳು ಸಿಕ್ಕಿವೆ ಎಂದು ಚೆಸ್ಟರ್ ವಿಲಿಯಮ್ಸ್ ತಿಳಿಸಿದ್ದಾರೆ. (ಏಜೆನ್ಸೀಸ್)