ಸತತ ಗೆಲುವಿನ ಖುಷಿಯಲ್ಲಿರುವ ಟೀಮ್ ಇಂಡಿಯಾಗೆ ಗುಡ್​ ನ್ಯೂಸ್...​​ ಆತ ಮತ್ತೆ ಎಂಟ್ರಿ ಕೊಟ್ಟಾಯ್ತು! Champions Trophy

Champions Trophy
Published on

Champions Trophy : ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಗೆಲುವಿನೊಂದಿಗೆ ಅಬ್ಬರಿಸುತ್ತಿರುವ ಟೀಮ್ ಇಂಡಿಯಾಗೆ ಇದೀಗ ಮತ್ತೊಂದು ಒಳ್ಳೆಯ ಸುದ್ದಿ ಸಿಕ್ಕಿದೆ. ಈ ಮೆಗಾ ಟೂರ್ನಮೆಂಟ್‌ನ ಮೊದಲ ಎರಡು ಪಂದ್ಯಗಳಿಗೆ ಗೈರುಹಾಜರಾಗಿದ್ದ ಭಾರತೀಯ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಇದೀಗ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.

ತಮ್ಮ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಈ ಮೆಗಾ ಟೂರ್ನಮೆಂಟ್ ಪ್ರಾರಂಭವಾಗುವ ಮೊದಲು ಮಾರ್ಕೆಲ್ ಅವರು ತಮ್ಮ ತಾಯ್ನಾಡಿಗೆ ತೆರಳಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನವೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಮ್​ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದರು. ತಂದೆಯ ಅಂತಿಮ ವಿಧಿ-ವಿಧಾನಗಳನ್ನು ಮುಗಿಸಿರುವ ಮಾರ್ಕೆಲ್, ಇದೀಗ ಮರಳಿ ತಂಡವನ್ನು ಸೇರಿಕೊಂಡಿದ್ದು, ಇನ್ನಷ್ಟು ಬಲ ತುಂಬಿದೆ.

ಸದ್ಯ ಮಾರ್ನೆ ಮಾರ್ಕೆಲ್​ ಅವರು ತರಬೇತಿಯಲ್ಲಿ ತೊಡಗಿದ್ದಾರೆ. ಮಾರ್ಚ್​ 2ರಂದು ನ್ಯೂಜಿಲೆಂಡ್ ವಿರುದ್ಧ ಟೀಮ್​ ಇಂಡಿಯಾ ತನ್ನ ಕೊನೆಯ ಲೀಗ್​ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲೂ ಗೆಲುವಿನ ನಗೆ ಬೀರಲು ಟೀಮ್​ ಇಂಡಿಯಾ ಕಸರತ್ತು ನಡೆಸುತ್ತಿದೆ. ಮಾರ್ಕೆಲ್​ ತರಬೇತಿ ಅಡಿಯಲ್ಲಿ ಭಾರತೀಯ ವೇಗಿಗಳು ಬೆವರು ಸುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ 40 ವರ್ಷದ ಮಾರ್ನೆ ಮಾರ್ಕೆಲ್​ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತದ ವೇಗದ ಬೌಲಿಂಗ್ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡರು. ಇದಾದ ಬಳಿಕ ಭಾರತದ ವೇಗದ ಬೌಲಿಂಗ್​ ವಿಭಾಗವು ಬಲಗೊಂಡಿದೆ.

ಪಂತ್​ ಫಿಟ್​

ನೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಸಂಪೂರ್ಣ ಫಿಟ್ನೆಸ್ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಪಂತ್ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಮೂರು ದಿನಗಳ ಕಾಲ ಅಭ್ಯಾಸದಿಂದ ದೂರ ಉಳಿದಿದ್ದರು. ಈಗ ಅವರು ಸಂಪೂರ್ಣ ಫಿಟ್ನೆಸ್ ಪಡೆದುಕೊಂಡಿರುವುದರಿಂದ ಪಂತ್ ತಮ್ಮ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರಿಂದ, ಪಂತ್ ಅವರನ್ನು ಮೊದಲ ಎರಡು ಪಂದ್ಯಗಳಿಗೆ ಬೆಂಚ್‌ಗೆ ಸೀಮಿತಗೊಳಿಸಲಾಯಿತು. ಕಿವೀಸ್ ವಿರುದ್ಧದ ಪಂದ್ಯಕ್ಕೂ ಪಂತ್ ಅವರನ್ನು ಹೊರಗಿಡುವ ಸಾಧ್ಯತೆಯಿದೆ. ಮಾರ್ಚ್ 2ರಂದು ನಡೆಯಲಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಈ ಎರಡೂ ತಂಡಗಳು ಈಗ ತಮ್ಮ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net