

ಬೆಂಗಳೂರು: ಹಿರಿಯ ಸಾಹಿತಿಗಳಿಗೆ ಅನಾಮಧೇಯ ಬೆದರಿಕೆ ಪತ್ರಗಳು ಬಂದಿರುವ ಕುರಿತ ತನಿಖೆಯನ್ನು ಬೆಂಗಳೂರು ನಗರ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಬೆದರಿಕೆ ಪತ್ರಗಳ ಕುರಿತು ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳನ್ನು ನಗರ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್ ಸೂಚಿಸಿದ್ದಾರೆ.
ತನಿಖೆಗೆ ಎಸಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ತಂಡ ರಚನೆ ಮಾಡಬೇಕು. ಪ್ರತಿಯೊಂದು ಆಯಾಮದಿಂದಲೂ ಪರಿಶೀಲಿಸಬೇಕು. ನಗರ ಪೊಲೀಸ್ ಆಯುಕ್ತರು ಹಾಗೂ ಜಂಟಿ ಆಯುಕ್ತರು ಪ್ರತಿನಿತ್ಯ ತನಿಖೆ ಪ್ರಗತಿಯ ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಕುಂ.ವೀರಭದ್ರಪ್ಪ-ಕೊಟ್ಟೂರು ಠಾಣೆಯಲ್ಲಿ, ಬಿ.ಎಲ್.ವೇಣು-ಚಿತ್ರದುರ್ಗ ಬಡಾವಣೆ ಠಾಣೆಯಲ್ಲಿ, ಬಂಜಗೆರೆ ಜಯಪ್ರಕಾಶ್-ಹಾರೋಹಳ್ಳಿ ಠಾಣೆಯಲ್ಲಿ ಎರಡು ದೂರು, ಬಿ.ಟಿ.ಲಲಿತಾನಾಯಕ್-ಸಂಜಯ್‌ನಗರ ಠಾಣೆಯಲ್ಲಿ ಹಾಗೂ ಡಾ.ವಸುಂಧರ ಭೂಪತಿ-ಬಸವೇಶ್ವರ ನಗರ ಠಾಣೆಯಲ್ಲಿ ಎರಡು ದೂರು ದಾಖಲಿಸಿದ್ದಾರೆ.