

ಕಾನ್ಪುರ: ನನಗೆ ಬಿಜೆಪಿ ನಾಯಕನೋರ್ವನಿಂದ ಜೀವ ಬೆದರಿಕೆ ಇದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಕನೌಜ್ನಲ್ಲಿರುವ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ನನಗೆ ಬಿಜೆಪಿ ನಾಯಕನೋರ್ವನಿಂದ ಜೀವ ಬೆದರಿಕೆ ಇದೆ. ಮೆಸೇಜ್ ಕೂಡ ಬಂದಿದೆ. ಅದನ್ನೆಲ್ಲ ನನ್ನ ಮೊಬೈಲ್ನಲ್ಲಿ ಸೇವ್ ಮಾಡಿಟ್ಟುಕೊಂಡಿದ್ದೇನೆ. ಈ ವಿಷಯಗಳ ಬಗ್ಗೆ ಇನ್ನೊಂದೆರಡು ದಿನಗಳಲ್ಲಿ ಲಖನೌದಲ್ಲಿ ಮಾಧ್ಯಮಗಳ ಎದುರು ಮಾತನಾಡುತ್ತೇನೆ ಎಂದಿದ್ದಾರೆ.
ದೇಶದಲ್ಲಿ ಹಣದುಬ್ಬರ ಅಧಿಕವಾಗುತ್ತಿರುವ ಬಗ್ಗೆ ಅಖಿಲೇಶ್ ಯಾದವ್ ಪಕ್ಷದ ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಯುವಕನೋರ್ವ ಎದ್ದು ನಿಂತು, ಒಂದೊಮ್ಮೆ ನೀವು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಏನು ಯೋಜನೆ ಅನುಷ್ಠಾನಕ್ಕೆ ತರುತ್ತೀರಿ ಎಂದು ಕೇಳಿದ.
ಆದರೆ ಅಖಿಲೇಶ್ ಯಾದವ್ಗೆ ಆತ ಮಾತನಾಡುತ್ತಿರುವುದು ಸರಿಯಾಗಿ ಕೇಳುತ್ತಿರಲಿಲ್ಲ. ಹಾಗಾಗಿ ಹತ್ತಿರ ಬಂದು ಹೇಳು ಎಂದು ಯುವಕನಿಗೆ ಹೇಳಿದರು.
ಆಗ ಯುವಕ ಜೈ ಶ್ರೀರಾಮ್ ಎಂದು ದೊಡ್ಡದಾಗಿ ಕೂಗಿದ. ನೀನು ಭಾರತೀಯ ಜನತಾ ಪಾರ್ಟಿಗೆ ಸೇರಿದವನಾ ಎಂದು ಅಖಿಲೇಶ್ ಆತನಲ್ಲಿ ಪ್ರಶ್ನಿಸಿದರು. ಅದಕ್ಕಾತ ನಾನು ಶ್ರೀರಾಮ, ಕೃಷ್ಣ, ವಿಷ್ಣು, ಶಿವ ಎಲ್ಲ ದೇವರನ್ನೂ ಪೂಜೆ ಮಾಡುತ್ತೇನೆ ಎಂದು ಉತ್ತರಿಸಿದ.
ಅದಾದ ಬಳಿಕ ಅಖಿಲೇಶ್ ಯಾದವ್ ಪೊಲೀಸರಿಗೆ ಈ ವಿಚಾರ ತಿಳಿಸಿದರು. ಅಲ್ಲದೆ, ಆ ಯುವಕ ಭದ್ರತೆಯನ್ನೂ ಮೀರಿ ಬಂದು ಅದ್ಹೇಗೆ ಜೈ ಶ್ರೀರಾಮ್ ಎಂದು ಕೂಗಿದ? ಆತನನ್ನು ಕರೆದುಕೊಂಡು ಬಂದು ನನ್ನೆದುರು ನಿಲ್ಲಿಸಿ. ಅಲ್ಲದೆ, ಅವನು ಯಾರು, ಎಲ್ಲಿಯವನು, ಆತನ ತಂದೆ ಯಾರು ಎಂಬೆಲ್ಲ ಮಾಹಿತಿಗಳೂ ಬೇಕು ಎಂದು ಹೇಳಿದರು. ಆ ಯುವಕ ತಂದಿದ್ದ ಬ್ಯಾಗ್ ಕೂಡ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು. ಈ ಘಟನೆ ನಡೆದ ಬಳಿಕ ತನಗೆ ಬಿಜೆಪಿ ನಾಯಕನೋರ್ವನಿಂದ ಬೆದರಿಕೆ ಇರುವುದಾಗಿ ಅಖಿಲೇಶ್ ಬಹಿರಂಗ ಪಡಿಸಿದರು.
ಅಲ್ಲದೆ ಈಗೆರಡು ದಿನಗಳ ಹಿಂದ ಬಿಜೆಪಿ ನಾಯಕ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಈಗ ಈ ವ್ಯಕ್ತಿ ಭದ್ರತೆಯನ್ನೂ ಮೀರಿ ನನ್ನ ಬಳಿ ಬರಲು ಪ್ರಯತ್ನಿಸಿದ್ದಾನೆ. ನನಗೇನಾದರೂ ಆದರೆ ಯಾರು ಹೊಣೆ? ಆತನನ್ನು ಯಾವ ಪ್ರಕರಣದಡಿ ಬಂಧಿಸುತ್ತೀರಿ? ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದರು.
ಜೈ ಶ್ರೀರಾಮ್ ಎಂದು ಕೂಗಿದ ವ್ಯಕ್ತಿಯನ್ನು ಗೋವಿಂದ್ ಶುಕ್ಲಾ ಎಂದು ಗುರುತಿಸಲಾಗಿದೆ. ಈತ ಗುಗ್ರಾಪುರ ಗ್ರಾಮದವನು. ಶಾಂತಿ ಕದಡಿದ ಆರೋಪದಡಿ ಅವನ ಮೇಲೆ ಪ್ರಕರಣ ದಾಖಲಾಗುವುದು.
ಈತ ಪದವೀಧರ. ಕಾನ್ಪುರದಲ್ಲಿ ಎಲ್ಎಲ್ಬಿ ಓದುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿನೋದ್ ಮಿಶ್ರಾ ತಿಳಿಸಿದ್ದಾರೆ. (ಏಜೆನ್ಸೀಸ್)