

ಬೆಂಗಳೂರು: ದೇವೇಗೌಡರ ಕುಟುಂಬ ಸಾವಿರಾರು ಕೋಟಿ ಒಡೆಯರಾಗಿದ್ದಾರೆ ಎಂಬುದನ್ನು ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಹೊಂದುವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಂವಿಧಾನ ಮೇಲಿನ ಚರ್ಚೆಯಲ್ಲಿ ಮಾತನಾಡಿ, ಕೆಲವರು ನನ್ನ ಮತ್ತು ನಮ್ಮ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಆರೋಪ ಸಾಬೀತುಪಡಿಸಲಿ. ಇಲ್ಲವೇ ಲಘುವಾಗಿ ಮಾತನಾಡುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಕುಟುಂಬ ರಾಜಕಾರಣ ಬಗ್ಗೆಯೂ ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ವೈದ್ಯರ ಮಕ್ಕಳು ವೈದ್ಯರು ಆಗುವಂತೆ ರಾಜಕಾರಿಣಿಗಳ ಮಕ್ಕಳು ರಾಜಕಾರಣಕ್ಕೆ ಬರುತ್ತಿದ್ದಾರೆ. ಇದು ನಮ್ಮ ಪಕ್ಷಕ್ಕೆ ಮಾತ್ರ ಸೀಮಿತ ಮಾಡಬೇಡಿ. ಎಲ್ಲ ಪಕ್ಷಗಳಲ್ಲಿಯೂ ಇದೇ ರೀತಿ ಆಗುತ್ತಿದೆ ಎಂದರು. ಸಂವಿಧಾನ ಬಗ್ಗೆ ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕೇಳಿದ್ದೇನೆ.
ಎಲ್ಲವೂ ಇದ್ದೂ ಇಲ್ಲದ ಹಾಗೆ ಆಗಿದೆ. ಸಂವಿಧಾನ ಮೂರು ಅಂಗಗಳ ಬಗ್ಗೆ ಚರ್ಚೆಯಲ್ಲಿ ಎಲ್ಲವನ್ನೂ ಪ್ರಸ್ತಾಪಿಸಲಾಗಿದೆ. ನ್ಯಾಯಾಂಗದ ಹಾದಿಯಲ್ಲೂ ಲೋಪಗಳಾಗುತ್ತಿರುವಾಗ ಯಾರಿಗೆ ಏನು ಹೇಳುವುದು ಎನ್ನುವ ಪ್ರಶ್ನೆ ಉದ್ಭವಿಸಿದೆ. ನಾವೇ ಈ ವ್ಯವಸ್ಥೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನಾವು ಏನೇ ಆದೇಶ ಮಾಡಿದರೂ ಅದಕ್ಕೆ ಅಧಿಕಾರಿಶಾಹಿ ಅಡ್ಡ ಬರುತ್ತದೆ. ಅವರನ್ನು ಬಿಟ್ಟು ಏನೂ ಮಾಡುವಂತಿಲ್ಲ. ಇದು ವಾಸ್ತವ. ಮೊದಲು ಭ್ರಷ್ಟ ವ್ಯವಸ್ಥೆ ನಿಲ್ಲಿಸುವುದಾದರೆ ಜೆಡಿಎಸ್ ಯಡಿಯೂರಪ್ಪ ಅವರಿಗೆ ಪೂರ್ಣ ಸಹಕಾರ ನೀಡಲು ಬದ್ದವಾಗಿದೆ ಎಂದರು. ನಾನು ಆಸೆಪಟ್ಟು ರಾಜಕಾರಣಕ್ಕೆ ಬಂದವನಲ್ಲ. ಯಡಿಯೂರಪ್ಪ ಸಹಕಾರದಿಂದ ಮೊದಲ ಬಾರಿಗೆ ಸಿಎಂ ಆಗುವ ಯೋಗವೂ ಕೂಡಿ ಬಂತು. ಅದನ್ನು ಇಲ್ಲ ಎಂದು ಅಲ್ಲಗಳೆಯಲು ಹೋಗುವುದಿಲ್ಲ. ರಾಜಕಾರಣ ದಲ್ಲಿ ಜನರ ಪರವಾಗಿ ಕೆಲಸ ಮಾಡಿದ್ದೇನೆ. ನನ್ನ ಬಳಿ ಬಂದ ಹಣವನ್ನು ಮರಳಿ ಜನರಿಗೇ ನೀಡಿದ್ದೇನೆ ಎಂದರು.
ನ್ಯಾಯಾಂಗ, ಕಾರ್ಯಾಂಗ ವಿಫಲವಾಗುತ್ತಿರುವ ಕಾರಣಕ್ಕೆ ರೌಡಿಗಳು ವ್ಯಾಜ್ಯ ಬಗೆಹರಿಸುವ ಪಾತ್ರ ನಿರ್ವಹಿಸುತ್ತಿದ್ದಾರೆ. ಬಡವರು ಇಂದಿಗೂ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೌಡಿಗಳೇ ತೀರ್ಪು ನೀಡುವುದಾದರೆ ನಮ್ಮ ವ್ಯವಸ್ಥೆ ಬಗ್ಗೆ ಪರಾಮರ್ಶೆ ಆಗಬೇಕಲ್ಲವೇ? ಎಂದರು.