ಕಾಂಗ್ರೆಸ್ ಒಕ್ಕಲಿಗ ಶಾಸಕರ ಚಿಂತನ- ಮಂಥನ; ಭವಿಷ್ಯದ ಬಗ್ಗೆ ಚಿಂತೆ, ಚರ್ಚೆ

congress
Published on

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ನಿರೀಕ್ಷಿತ ಲಿತಾಂಶ ಬಾರದ ಹಿನ್ನೆಲೆ ಮತ್ತು ಒಕ್ಕಲಿಗ ಮತಗಳು ಗಣನೀಯ ಪ್ರಮಾಣದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ವಾಲಿದೆ ಎಂಬ ಚರ್ಚೆ ನಡೆದಿರುವಾಗಲೇ ಗುರುವಾರ ಕಾಂಗ್ರೆಸ್‌ನಲ್ಲಿ ಮಹತ್ವದ ಸಭೆ ನಡೆದಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಒಕ್ಕಲಿಗ ಶಾಸಕರು, ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಸಭೆ ಕರೆದು, ಚರ್ಚೆಗೆ ವೇದಿಕೆ ಒದಗಿಸಿಕೊಟ್ಟರು.

ವಿಧಾನಸಭೆ ಚುನಾವಣೆಯಲ್ಲಿ ಗಣನೀಯವಾಗಿ ಕುಸಿತ ಕಂಡಿದ್ದ ಜೆಡಿಎಸ್ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸಖ್ಯ ಬೆಳೆಸಿದ್ದರಿಂದ ಎರಡೂ ಪಕ್ಷಕ್ಕೆ ಗಣನೀಯ ಲಾಭವಾಗಿದೆ. ಮುಖ್ಯವಾಗಿ ಒಕ್ಕಲಿಗರು ಹೆಚ್ಚಿರುವ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪೆಟ್ಟುಬಿದ್ದಿದೆ ಎಂಬ ಚರ್ಚೆ ಈ ಅನೌಪಚಾರಿಕ ಸಭೆಯಲ್ಲಿ ಚರ್ಚೆಯಾಗಿದೆ.

ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದ ಜೆಡಿಎಸ್‌ಗೆ ಈ ಲೋಕಸಭೆ ಚುನಾವಣೆ ದೊಡ್ಡ ಬೂಸ್ಟ್ ಕೊಟ್ಟಂತಾಗಿದೆ. ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರದ ಮಂತ್ರಿಯಾಗಿರುವುದು ಜೆಡಿಎಸ್‌ಗೆ ಆನೆ ಬಲ ತಂದುಕೊಟ್ಟಂತಾಗಿದೆ. ಪಕ್ಷದಿಂದ ನಾಯಕರ ವಲಸೆ ಕೂಡ ತಡೆಯುವ ಅವಕಾಶ ಅವರಿಗೆ ಸಾಧ್ಯವಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಶಾಸಕರು ಹಂಚಿಕೊಂಡಿದ್ದಾರೆ.

ಇನ್ನೊಂದು ಪ್ರಮುಖ ಸಂಗತಿ ಎಂದರೆ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತಿದ್ದ ಒಕ್ಕಲಿಗ ಮತಗಳು ಪುನಃ ಜೆಡಿಎಸ್‌ನತ್ತ ವಾಲಿವೆ. ಇದು ಅಲ್ಲೇ ನೆಲೆ ನಿಲ್ಲಬಾರದು, ಪುನಃ ಕಾಂಗ್ರೆಸ್‌ನತ್ತ ಬರುವಂತೆ ಮಾಡಬೇಕು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದರ ಪರಿಣಾಮ ಕಾಣಬೇಕೆಂಬ ಸಲಹೆ ಬಂದಿದೆ.

ಕಾಂಗ್ರೆಸ್‌ನಲ್ಲಿ 21 ಒಕ್ಕಲಿಗ ಶಾಸಕರಿದ್ದು, ಲೋಕಸಭೆ ಚುನಾವಣೆಯಲ್ಲಿ ಬಹುಪಾಲು ಶಾಸಕರು ಎದುರಾಳಿ ಅಭ್ಯರ್ಥಿಗೆ ಲೀಡ್ ಬಿಟ್ಟುಕೊಟ್ಟಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಸಮುದಾಯದ ಶಾಸಕರು ಒಟ್ಟಾಗಿರಬೇಕೆಂಬ ಸಂದೇಶವನ್ನೂ ಈ ಸಭೆ ಮೂಲಕ ಕಳಿಸಲಾಯಿತು. ಅದೇ ರೀತಿ ಗುರುವಾರದ ಭೋಜನ ಕೂಟಕ್ಕೂ ಕೆಲವರು ವಿವಿಧ ನೆಪ ಹೇಳಿ ದೂರ ಉಳಿದಿದ್ದರು.

ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಸಭೆಯಲ್ಲಿ ಪಾಲ್ಗ್ಗೊಂಡು ಕಾಂಗ್ರೆಸ್‌ಗಾದ ಹಿನ್ನೆಡೆ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಉಳಿದಂತೆ ಸಭೆಯಲ್ಲಿ ಸಚಿವ ಸುಧಾಕರ್, ಚಲುವರಾಯಸ್ವಾಮಿ, ರಾಮಲಿಂಗಾ ರೆಡ್ಡಿ, ಕೃಷ್ಣಬೈರೇಗೌಡ, ಎಂ.ಕೃಷ್ಣಪ್ಪ, ರಾಜೀವ್ ಗೌಡ, ಮುದ್ದಹನುಮೇಗೌಡ, ಸೌಮ್ಯ ರೆಡ್ಡಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net