

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇತ್ತೀಚೆಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಲೋಪದೋಷ ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳಿಗೆ 8 ಕೃಪಾಂಕ ನೀಡಲು ನಿರ್ಧರಿಸಿದೆ. ಆ. 28ರಿಂದ 30ವರೆಗೆ ನಡೆದಿದ್ದ ಸಿಇಟಿಯನ್ನು 2,01,834 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಸೆ. 20ರಂದು ಫಲಿತಾಂಶ ಪ್ರಕಟವಾಗಲಿದೆ. ಭೌತಶಾಸ್ತ್ರ(2), ರಸಾಯನಶಾಸ್ತ್ರ (ಎ1 ಶ್ರೇಣಿಯಲ್ಲಿ 24ನೇ ಪ್ರಶ್ನೆಗೆ ಬಿ ಮತ್ತು ಸಿ ಎರಡೂ ಉತ್ತರಗಳು ಸರಿ ಇದೆ), ಗಣಿತದಲ್ಲಿ (2 ಕೃಪಾಂಕ ಹಾಗೂ ಎ ಶ್ರೇಣಿಯ ಪ್ರಶ್ನೆ 21 ಮತ್ತು 37ಕ್ಕೆ ಉತ್ತರಗಳ ಗೊಂದಲ ಇದೆ), ಜೀವಶಾಸ್ತ್ರದಲ್ಲಿ (ಎ1 ಶ್ರೇಣಿಯ 40ನೇ ಪ್ರಶ್ನೆ ಬಿ ಮತ್ತು ಡಿ ಆಯ್ಕೆಗಳೆರಡೂ ಸರಿ ಇದೆ). ಈ ರೀತಿ ಸ್ವಯಂ ಘೋಷಿತವಾಗಿ ಕೆಇಎ 4 ದೋಷಗಳನ್ನು ಕಂಡು ಹಿಡಿದು ಅದಕ್ಕೆ ಕೃಪಾಂಕ ಘೋಷಣೆ ಮಾಡಿದೆ. ಸದ್ಯ ಘೋಷಣೆ ಮಾಡಿರುವ 4 ಹಾಗೂ ಮಾಡಬೇಕಿರುವ 4 ಸೇರಿ ಒಟ್ಟಾರೆ 8 ಕೃಪಾಂಕ ವಿದ್ಯಾರ್ಥಿಗಳ ಖಾತೆಗೆ ಜಮೆ ಆಗುವುದು ಖಚಿತವಾಗಿದೆ.
ಫಲಿತಾಂಶಕ್ಕೆ ಸಿದ್ಧತೆ?: ಕಳೆದ ವರ್ಷವೂ ಭೌತಶಾಸ್ತ್ರ 2, ರಸಾಯನಶಾಸ್ತ್ರ-2, ಗಣಿತ-3 ಹಾಗೂ ಜೀವಶಾಸ್ತ್ರ-1 ಸೇರಿ 8 ಕೃಪಾಂಕವನ್ನು ನೀಡಲಾಗಿತ್ತು. 2015ರಲ್ಲಿ 23 ಕೃಪಾಂಕ ನೀಡಿದ ದಾಖಲೆಯನ್ನು ಪಿಯು ಇಲಾಖೆ ಹೊಂದಿದೆ.
ಏಕೆ ಕೃಪಾಂಕ?: ವಿಜ್ಞಾನ ವಿಷಯದಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣ ಮಾಡುವಾಗ ಸಾಕಷ್ಟು ಎಚ್ಚರವಹಿಸಬೇಕಾಗಿರುತ್ತದೆ. ಏಕೆಂದರೆ, ಸಾಮಾನ್ಯ ಪ್ರಶ್ನೆ ಪತ್ರಿಕೆಯಲ್ಲಿ ಪದಗಳು ತಪ್ಪಾದರೂ ಅಂತಹ ವ್ಯತ್ಯಾಸವೇನು ಆಗುವುದಿಲ್ಲ. ಆದರೆ, ಇಲ್ಲಿ ಸಣ್ಣ ಒಂದು ಚುಕ್ಕೆ ಬಿದ್ದರೂ ಕೂಡ ಸೂತ್ರ ಬದಲಾಗುತ್ತವೆ. ಆದರಿಂದ ಎಷ್ಟೇ ಎಚ್ಚರವಹಿಸಿದರೂ ಸಹ ಮುದ್ರಣದಿಂದ ತಪ್ಪಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆಕ್ಷೇಪಣೆಗೆ ಅರ್ಜಿ: ಸಿಇಟಿ ಪ್ರಶ್ನೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿ ಆಕ್ಷೇಪಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು 200ರಿಂದ 250 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇವುಗಳ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚು ಆಕ್ಷೇಪಣೆ ವ್ಯಕ್ತವಾಗಿದ್ದರೆ, ಅವನ್ನು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಸಮಿತಿಗೆ ಸಲ್ಲಿಸಲಾಗುತ್ತಿದೆ. ಅವರು ಅದನ್ನು ಪರಿಶೀಲಿಸಿ ಕೃಪಾಂಕ ನೀಡಬೇಕೆಂದು ಸೂಚಿಸಿದರೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಕೃಪಾಂಕ ದೊರೆಯುವ ಸಾಧ್ಯತೆ ಹೆಚ್ಚಿದೆ.
ವಿದ್ಯಾರ್ಥಿಗಳಿಗೆ ಅನುಕೂಲ: ಸಿಇಟಿ ರ‍್ಯಾಂಕಿಂಗ್ ಅನ್ನು ಇಂಜಿನಿಯರಿಂಗ್, ಕೃಷಿ, ಪಶು ಸಂಗೋಪನೆ, ಯೋಗ, ಫಾರ್ವ ಕೋರ್ಸ್ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿ ನೇರವಾಗಿ ಪಾಸ್ ಮಾಡಿರುವುದರಿಂದ ದ್ವಿತೀಯ ಪಿಯು ಅಂಕಗಳನ್ನು ಸಿಇಟಿಗೆ ಪರಿಗಣಿಸುತ್ತಿಲ್ಲ. ಈ ಮೊದಲು ದ್ವಿತೀಯ ಪಿಯು ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕ ಪರಿಗಣಿಸಿ ರ್ಯಾಂಕ್ ಪಟ್ಟಿ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಸಿಇಟಿ ಅಂಕಗಳನ್ನೇ ಶೇ.100ಕ್ಕೆ ಲೆಕ್ಕಹಾಕಿ ರ್ಯಾಂಕ್ಪಟ್ಟಿ ಸಿದ್ಧಪಡಿಸಲಿದೆ.
ಕೃಪಾಂಕದ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲಾಗದು. ಆಕ್ಷೇಪಣೆಗಳನ್ನು ತಜ್ಞರ ಸಮಿತಿ ಪರಿಶೀಲಿಸುತ್ತಿದೆ. ಅವರು ವರದಿ ನೀಡಿದ ಮೇಲೆ ನಿರ್ಧಾರ ಮಾಡುತ್ತೇವೆ.
| ಎಸ್.ರಮ್ಯಾ ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ