ಇನ್ನು ಬ್ರಿಟಿಷರು ನೇಣಿಗೇರಿಸಿದವರ ಸಂಖ್ಯೆಯೇನೂ ಕಡಿಮೆಯಲ್ಲ. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನಂತೂ ಒಂದೇ ಸಮಯಕ್ಕೆ ಅಕ್ಕಪಕ್ಕದಲ್ಲಿ ನೇಣಿಗೇರಿಸಲಾಯಿತು. ಗಲ್ಲುಗಂಬಕ್ಕೆ ಹೆದರದ ಗುಂಡಿಗೆಯ ಈ ಧೀರರು ಆಗ ಹೇಳಿದ್ದು- "ಇಂಕ್ವಿಲಾಬ್ ಜಿಂದಾಬಾದ್' (ಕ್ರಾಂತಿ ಚಿರಾಯುವಾಗಲಿ). ಉಳಿದಂತೆ, ಅಶ್ಫಾಕುಲ್ಲಾ ಖಾನ್, ಮದನ್ ಲಾಲ್ ಧಿಂಗ್ರಾ, ರಾಮಪ್ರಸಾದ್ ಬಿಸ್ಮಿಲ್, ಖುದಿರಾಂ ಬೋಸ್.... ಒಬ್ಬರಾ ಇಬ್ಬರಾ? ಬದುಕಿ ಬೆಳಗಬೇಕಾದ ತನ್ನ ಮಕ್ಕಳು ಹೀಗೆ ನೇಣಿನ ಕುಣಿಕೆಯತ್ತ ಸಾಗುತ್ತಿರುವುದನ್ನು ಕಂಡು ಭಾರತಮಾತೆಯ ಕರುಳು ಎಷ್ಟು ನೊಂದಿರಬೇಡ. ಸ್ವಾತಂತ್ರ್ಯದೀಕ್ಷೆ ಸ್ವೀಕರಿಸಿದ್ದ ಈ ಸಾಹಸಿಗಳೋ ನೇಣಿನ ಕಂಬದತ್ತ ತೆರಳುತ್ತಿರುವಾಗಲೂ ಅಂಜಲಿಲ್ಲ, ಅಳುಕಲಿಲ್ಲ. ಮರುಕ್ಷಣದಲ್ಲೇ ಸಾವು ಎಂಬುದು ಗೊತ್ತಿದ್ದರೂ ಮುಖದಲ್ಲಿ ಹೆದರಿಕೆಯ ಸುಳಿವಿಲ್ಲ. ಇವರ ದಿಟ್ಟತನ ಕಂಡು ಬಹುಶಃ ನೇಣಿಗೇರಿಸುವವರೇ ಹೆದರಿರಬೇಕು. ಇನ್ನು, ಕ್ರಾಂತಿಕಾರ್ಯದಲ್ಲಿ ತೊಡಗಿಕೊಂಡು ಬ್ರಿಟಿಷರ ಕೈಗೆ ಸಿಗದೆಯೇ ಪ್ರಾಣಾರ್ಪಣೆ ಮಾಡಿಕೊಂಡ ಚಂದ್ರಶೇಖರ ಆಜಾದ್, ಪ್ರಫುಲ್ಲ ಚಾಕಿಯಂತಹ ಶೂರರೂ ಇದ್ದಾರೆ. ಸ್ವಾತಂತ್ರ್ಯದ ಆಗಸದಲ್ಲಿ ಹೀಗೆ ಕಣ್ಣುಕೋರೈಸುವ ಹಾಗೆ ಮಿನುಗಿದ ನಕ್ಷತ್ರಗಳು ಸಾವಿರ ಸಾವಿರ... ಇಲ್ಲಿ ಉಲ್ಲೇಖಿಸಿದ್ದು ಕೆಲವು ಮಾತ್ರ.