

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳು ಮುಖ್ಯಮಂತ್ರಿ ಕುಟುಂಬಕ್ಕೆ ಹಂಚಿದ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರು ನೀಡಿದ ಆದೇಶ ಸರಿಯಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಎತ್ತಿಹಿಡಿದು, ತೀರ್ಪು ಪ್ರಕಟಿಸಿದ ಬೆನ್ನಲ್ಲೇ ' ಉಪ್ಪು ತಿಂದವರು ನೀರು ಕುಡಿಯಲೇಬೇಕು' ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಈ ನೆಲದ ಕಾನೂನು ಮುರಿಯುವವರು ಎಷ್ಟೇ ದೊಡ್ಡವರಿರಲಿ ತಪ್ಪಿಸಿಕೊಳ್ಳವುದು ಸಾಧ್ಯವಿಲ್ಲ ಎನ್ನುವುದು ಈ ತೀರ್ಪಿನಿಂದ ಗೊತ್ತಾಗುತ್ತದೆ. ನ್ಯಾಯಪೀಠದ ಪೂರ್ಣ ಆದೇಶ ಅಧ್ಯಯನ ಮಾಡಿದ ನಂತರ ಮುಂದಿನ ಕ್ರಮದ ಬಗ್ಗೆ ಆಲೋಚಿಸುತ್ತೇವೆ ಎಂದರು.
ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವವರಾದರೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ. ಇಲ್ಲವೇ ಅರವಿಂದ ಕೇಜ್ರಿವಾಲ್ ರೀತಿಯಲ್ಲಿ ಸಿಎಂ ಕುರ್ಚಿಗೆ ಅಂಟಿಕೊಂಡು ಕುಳಿತಿರುತ್ತಾರೆ.
ಸಿಎಂ ಕುಟುಂಬಕ್ಕೆ ಲಾಭವಾಗಿದೆ, ತನಿಖೆ ಎದುರಿಸಲಿ ಎಂದು ಕೋರ್ಟ್ ಹೇಳಿದೆ. ಮುಡಾ ಅಕ್ರಮದ ವಿರುದ್ಧ ಬಿಜೆಪಿ ಮೈಸೂರು ಚಲೋ ಪಾದಯಾತ್ರೆ ನಡೆಸಿ, ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಕುರಿತು ಜನರಿಗೆ ತಿಳಿಸಿತ್ತು.
ಪಕ್ಷದ ಚಳವಳಿಗೆ ಜನರ ಸ್ಪಂದನೆ ಗಮನಿಸಿಯೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದುಕೊಂಡಿದ್ದೆವು. ಈಗ ಕೋರ್ಟ್ ತೀರ್ಪು ನೀಡಿರುವ ಕಾರಣ ರಾಜೀನಾಮೆ ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.