

ದ್ವಾರಕಾ ದೇವಸ್ಥಾನ ನಿರ್ಮಾಣ ವಿಚಾರ ನ್ಯಾಯಾಲಯದಲ್ಲಿತ್ತು. ದೇವಾಲಯ ಒಡೆದು ಮಸೀದಿ ಕಟ್ಟಿದ್ದಾರೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಸರ್ಕಾರದ ತಜ್ಞರು ತಿಳಿಸಿದರು. ಜೆಎನ್‌ಯು ವಿವಿಯ ನಾಲ್ಕು ಎಡಪಂಥೀಯ ತಜ್ಞರು ಅಲ್ಲಿ ಯಾವುದೇ ದೇವಾಲಯ ಇರಲಿಲ್ಲ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದರು. ಆ ನಂತರ ಅಲ್ಲಿ ದೇವಾಲಯವಿತ್ತು ಎಂಬ ವಿಚಾರ ಅಲ್ಲಿ ದೊರೆತ ಶಿಲಾ ಶಾಸನಗಳಿಂದ ತಿಳಿಯಿತು. ಆದರೆ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದವರಿಗೆ ಯಾವುದೇ ಶಿಕ್ಷೆ ಆಗಲಿಲ್ಲ ಎಂದು ಎಸ್.ಎಲ್.ಭೈರಪ್ಪ ಟೀಕಿಸಿದರು.
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಕನ್ನಡ ನಾಡಿಗೆ ರಾಜ್ಯಪಾಲರಾಗಿ ಹೊರಗಿನಿಂದ ಬಂದವರಿಗೆ ನಾವೇ ಅವಮಾನ ಮಾಡಬಾರದು. ವಿವಿಧ ಸಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ಅಪಾರವಾದ ಅನುಭವ ಹೊಂದಿರುವ ಆಧಾರದ ಮೇಲೆ ಅವರನ್ನು ರಾಜ್ಯಪಾಲರ ಹುದ್ದೆಗೆ ಆಯ್ಕೆ ಮಾಡಲಾಗಿರುತ್ತದೆ. ಅದನ್ನು ಅರಿತು ಅವರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಮಾತನಾಡಿ, ನಾನು ಮುಕ್ತ ಮನಸ್ಸಿನಿಂದ ನನ್ನ ಹುದ್ದೆಯನ್ನು ನಿಭಾಯಿಸುತ್ತೇನೆ. ನಮ್ಮ ನಾಡಿನ ಹಿರಿಮೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ. ಮೇಘಾಲಯದಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದೆ. ಮಹಿಳೆಯೇ ಮನೆಯ ಯಜಮಾನಿ. ಅಂತಹ ಉತ್ತಮವಾದ, ಗೌರವಯುತ ಸ್ಥಾನ ಮಹಿಳೆಯರಿಗೆ ಅಲ್ಲಿರುವುದು ಶ್ಲಾಘನೀಯ ಎಂದರು.
ರಾಜಭವನಕ್ಕೆ ಸೀಮಿತವಾಗದೆ, ಜನರ ಮಧ್ಯೆ ಇದ್ದು ಅವರ ಸಮಸ್ಯೆ ಆಲಿಸಿ. ಗಡಿ ಪ್ರದೇಶಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ನೋಡಿ ಪರಿಹರಿಸಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ ಎಂದು ಹೇಳಿದರು.