ಸಚಿವಾಕಾಂಕ್ಷಿಗಳಿಗೆ ನಿರಾಸೆ; ಸಿಎಂ ಪಟ್ಟಿ ಬಗ್ಗೆ ತೀರ್ಮಾನಕ್ಕೆ ಸಮಯಬೇಕೆಂದ ನಡ್ಡಾ

Bsy Nadda
ನಡ್ಡಾಗೆ ಪುಷ್ಪಗುಚ್ಛ ನೀಡಿದ ಯಡಿಯೂರಪ್ಪ.
Published on

ನವದೆಹಲಿ: ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮೂಲಕ ಮಂತ್ರಿಗಳಾಗುವ ಕನಸು ಹೊತ್ತಿದ್ದ ಆಕಾಂಕ್ಷಿ ಶಾಸಕರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಸದ್ಯಕ್ಕೆ ಬಿಜೆಪಿ ಹೈಕಮಾಂಡ್ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ತಿಂಗಳು ಜೆ.ಪಿ. ನಡ್ಡಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಗಳಿದೆ. ಆ ಸಂದರ್ಭದಲ್ಲೇ ಪಕ್ಷದ ಹಿರಿಯ ಮುಖಂಡರು, ಶಾಸಕರ ಜತೆಗೆ ರ್ಚಚಿಸಿ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಸಂಪುಟ ಪುನಾರಚನೆಗೆ ಹೈಕಮಾಂಡ್ ಅನುಮತಿ ಪಡೆಯಲೆಂದೇ ಸಿಎಂ ಯಡಿಯೂರಪ್ಪ ದೆಹಲಿಗೆ ಬಂದು ನಡ್ಡಾರನ್ನು ಭೇಟಿ ಮಾಡಿದ್ದರು. ಭೇಟಿ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಸಿಎಂ, ‘ಪುನಾರಚನೆ ಅಥವಾ ವಿಸ್ತರಣೆ ಹೈಕಮಾಂಡ್​ಗೆ ಬಿಟ್ಟ ವಿಚಾರ. ನನ್ನ ಅಭಿಪ್ರಾಯಗಳನ್ನು ಅವರ ಮುಂದೆ ಮಂಡಿಸಿದ್ದೇನೆ. ತಮಗೆ ಮೂರ್ನಾಲ್ಕು ದಿನಗಳ ಕಾಲಾವಕಾಶ ಬೇಕೆಂದು ಅವರು ಹೇಳಿದ್ದು, ನಂತರ ನಿರ್ಧಾರ ತೆಗೆದುಕೊಳ್ಳಬಹುದು' ಎಂದರು.

ಸಂಪುಟ ಪುನಾರಚನೆ ಯಡಿಯೂರಪ್ಪನವರ ಉದ್ದೇಶ. ಸದ್ಯ 7 ಸಚಿವ ಸ್ಥಾನಗಳು ಖಾಲಿ ಇದ್ದು, ಹಾಲಿ ಸಂಪುಟದಿಂದ ಮೂರ್ನಾಲ್ಕು ಸಚಿವರನ್ನು ಕೈಬಿಟ್ಟರೆ ಆಗ 10 ಸ್ಥಾನ ಖಾಲಿಯಾದಂತಾಗಲಿದೆ. ಒಂದು ಅಥವಾ 2 ಸ್ಥಾನಗಳನ್ನು ಉಳಿಸಿಕೊಂಡು ಉಳಿದೆಲ್ಲ ಸ್ಥಾನ ಭರ್ತಿ ಮಾಡಬೇಕೆಂದು ಸಿಎಂ ಯೋಚಿಸಿದ್ದರು. ಸರ್ಕಾರ ರಚನೆಗೆ ನೆರವಾಗಿದ್ದ ಶಾಸಕರಾದ ಮುನಿರತ್ನ , ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್​ಗೆ ಸಚಿವ ಸ್ಥಾನ ನೀಡಲೇಬೇಕು ಎನ್ನುವುದು ಬಿಎಸ್​ವೈ ಪ್ರತಿಪಾದನೆ. ಉಳಿದ ಸ್ಥಾನಗಳನ್ನು ಮೂಲ ಬಿಜೆಪಿ ಶಾಸಕರಿಗೆ ನೀಡಬೇಕು ಎಂದು ರ್ಚಚಿಸಿರುವ ಬಗ್ಗೆ ತಿಳಿದುಬಂದಿದೆ. ಭೇಟಿ ವೇಳೆ ಇತ್ತೀಚಿನ ಕೆಲವು ವಿವಾದಗಳ ಬಗ್ಗೆಯೂ ಬಿಎಸ್​ವೈ ಜೊತೆ ನಡ್ಡಾ ರ್ಚಚಿಸಿದರು ಎನ್ನಲಾಗಿದೆ. ಸಿಎಂಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಾಥ್ ನೀಡಿದ್ದರು.

ಷಾ ಭೇಟಿ ಇಲ್ಲ: ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾರನ್ನೂ ಭೇಟಿ ಮಾಡುವ ಉದ್ದೇಶವನ್ನು ಯಡಿಯೂರಪ್ಪ ಹೊಂದಿದ್ದರಾದರೂ ಕಾಲಾವಕಾಶ ಸಿಗದ ಕಾರಣ ಸಾಧ್ಯವಾಗಿಲ್ಲ. ಮಧ್ಯಾಹ್ನ 1.30ರ ವೇಳೆಗೆ ದೆಹಲಿ ತಲುಪಿದ್ದ ಸಿಎಂ, 5.30ಕ್ಕೆ ನಡ್ಡಾ ಭೇಟಿ ಪೂರ್ಣಗೊಳಿಸಿ ಬೆಂಗಳೂರಿಗೆ ವಾಪಸಾದರು.

ಒತ್ತಾಯದ ಬಂದ್​ಗೆ ಅವಕಾಶವಿಲ್ಲ: ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದನ್ನು ವಿರೋಧಿಸಿ ಡಿ.5ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್​ಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ದಲ್ಲಿರುವ ಮರಾಠಾ ಸಮುದಾಯವರು ಕನ್ನಡಿಗರೇ. ಈ ಸಮುದಾಯವರು ಕೇವಲ ಬೆಳಗಾವಿಯ ಕನ್ನಡ ಸಮ್ಮೇಳನಕ್ಕೆ ಮಾತ್ರವಲ್ಲ, ವಿಶ್ವ ಕನ್ನಡ ಸಮ್ಮೇಳನಕ್ಕೂ ಮನಃಪೂರ್ವಕ ಬೆಂಬಲ ನೀಡಿದ್ದವರು. ಈ ಸಮುದಾಯದಲ್ಲಿನ ಹಿಂದುಳಿದವರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.

ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬುದು ಹೈಕಮಾಂಡ್​ಗೆ ಬಿಟ್ಟ ವಿಚಾರ. ನನ್ನ ಅಭಿಪ್ರಾಯಗಳನ್ನು ಮಂಡಿಸಿದ್ದೇನೆ. ಮೂರ್ನಾಲ್ಕು ದಿನ ಕಾಲಾವಕಾಶ ಬೇಕು ಎಂದವರು ಹೇಳಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net