ಬೋಲೇ ಬಾಬನ ಕಾಲಿನ ಧೂಳಿಗೆ ಮುಗಿಬಿದ್ದವರು ಅನಕ್ಷರಸ್ಥರಲ್ಲ: ಸಚಿವ ಸತೀಶ್ ಜಾರಕಿಹೊಳಿ

Dravida Movement
Published on

ಬೆಂಗಳೂರು ಧರ್ಮ, ಜಾತಿ ಮತ್ತು ಭ್ರಷ್ಟಾಚಾರ ದೇಶಕ್ಕೆ ಅಪಾಯವೆಂದು ಹಿಂದೆ ಹೇಳುತ್ತಿದ್ದರು. ಈಗ ಅದು ಇನ್ನೂ ಹೆಚ್ಚು ಅಪಾಯಕಾರಿ ಕೆಲಸ ಮಾಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಗಾಂಧಿಭವನದಲ್ಲಿ ಬುಧವಾರ ಹಿರಿಯ ಪತ್ರಕರ್ತ ಆರ್. ವಿಜಯಕುಮಾರ್ ಅವರ ನೆನಪಿನಲ್ಲಿ ಹಮ್ಮಿಕೊಂಡಿದ್ದ ‘ದ್ರಾವಿಡ ಚಳವಳಿ ಮತ್ತು ವರ್ತಮಾನ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಚನ ಚಳವಳಿ ಮತ್ತು ದ್ರಾವಿಡ ಚಳವಳಿಯನ್ನು ಜನರಿಗೆ ತಿಳಿಸಿ ಮೂಢನಂಬಿಕೆಯನ್ನು ಹೋಗಲಾಡಿಸಿದಾಗ ಉತ್ತಮ ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದವನು ಈಗ ಸ್ವಾಮೀಜಿಯಾಗಿದ್ದಾನೆ. ಅವನ ಸತ್ಸಂಗದಲ್ಲಿ ಪಾಲ್ಗೊಂಡು ಸ್ವಾಮೀಜಿ ಪಾದದ ಮಣ್ಣು ಮುಟ್ಟಿ, ತಲೆಯ ಮೇಲೆ ಹಾಕಿಕೊಳ್ಳಲು ಲಕ್ಷಾಂತರ ಜನ ಸೇರಿದ್ದರು. ವಿಜ್ಞಾನ, ತಂತ್ರಜ್ಞಾನವೆಂದು ಮುಂದುವರಿದ ಸಮಯದಲ್ಲಿಯೂ ಸ್ವಾಮೀಜಿ ಪಾದದ ಮಣ್ಣಿಗೆ ಮುಗಿಬಿದ್ದಿದ್ದವರು ಹೆಬ್ವೆಟ್ಟು ಅಲ್ಲ, ವಿದ್ಯಾವಂತರೇ ಆಗಿದ್ದರು ಎಂದು ಮಾರ್ಮಿಕವಾಗಿ ಹೇಳಿದರು.

ಇದೇ ರೀತಿ ಉತ್ತರ ಭಾರತ ಹಾಗೂ ಕರ್ನಾಟಕದಲ್ಲಿಯೂ ಸಾಕಷ್ಟು ಜನರಿದ್ದಾರೆ. ಪೂಜೆ-ಪುನಸ್ಕಾರ, ವಿಧಿ-ವಿಧಾನಗಳಿಂದ ಶ್ರೀಮಂತರನ್ನಾಗಿ, ಶಾಸಕರನ್ನಾಗಿಸುತ್ತೇವೆ ಎನ್ನುವವರ ಮೇಲೆ ಕಣ್ಣಿಡಬೇಕಿದೆ. ಏಕೆಂದರೆ, ನಾಲ್ಕು ಪಕ್ಷದವರು ಅವರ ಬಳಿ ಹೋದರೂ ಎಲ್ಲರಿಗೂ ಅದನ್ನೇ ಹೇಳುತ್ತಾರೆ.

ಅಂತಿಮವಾಗಿ ಗೆಲ್ಲುವುದು ಒಬ್ಬರೇ ಅದೂ ಜನರಿಂದ ಎಂಬ ಸತ್ಯವನ್ನು ತಿಳಿಯಬೇಕು. ಉತ್ತಮ ಕೆಲಸ ಮಾಡಿದಾಗ ಜನ ನಮ್ಮನ್ನು ಆರಿಸಿ ಕಳುಹಿಸುತ್ತಾರೆ ಎಂದರು.

ದ್ರಾವಿಡ ಚಳವಳಿ, ಬಸವಣ್ಣನ ಹೋರಾಟ, ಬುದ್ಧ, ನಾರಾಯಣ ಗುರು, ಪೆರಿಯಾರ್, ಸಾವಿತ್ರಿ ಬಾಪುಲೆ, ಜ್ಯೋತಿ ಬಾಪುಲೆ ಶಿಕ್ಷಣ ಕ್ರಾಂತಿ, 100 ವರ್ಷಗಳ ಹಿಂದೆಯೇ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಶಾಹು ಮಹಾರಾಜ್ ಅವರು ಮೀಸಲಾತಿ ಕೊಡುವ ಕೆಲಸ ಮಾಡಿದ್ದರು. ಇಂತಹ ವಿಚಾರಗಳನ್ನು ಜನರಿಗೆ ಮುಟ್ಟಿಸಬೇಕು. ಎಲ್ಲ ಚಳವಳಿಯನ್ನು ಎಲ್ಲ ಸಮುದಾಯಕ್ಕೆ ತಿಳಿಸಿ ಸಮಾಜದ ಪರಿವರ್ತನೆಗೆ ಮುಂದಾದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು.

ಹೈಕೋರ್ಟ್ ನಿವೃತ್ತ ನ್ಯಾ.ಎಚ್.ಎಸ್. ನಾಗಮೋಹನ್ ದಾಸ್ ಮಾತನಾಡಿ, ದ್ರಾವಿಡ ಚಳವಳಿ ಎಂದರೆ ಬಹಳ ಜನರಿಗೆ ಇಂದಿಗೂ ತಮಿಳಿನ ಚಳವಳಿ, ದಕ್ಷಿಣದ ಚಳವಳಿ, ಮೂಲ ನಿವಾಸಿಗಳ ಚಳವಳಿ ಎನ್ನುತ್ತಾರೆ. ಆದರೆ, ದ್ರಾವಿಡ ಚಳವಳಿ ಎಂದರೆ ಅಸಮಾನತೆ ವಿರುದ್ಧದ ಚಳವಳಿ, ಸಮಾನತೆಯ ಸಾಧನೆಗಾಗಿ ಚಳವಳಿ. ಮೂಢನಂಬಿಕೆ, ಅಸ್ಪಶ್ಯತೆ ವಿರುದ್ಧದ ಚಳವಳಿಯಾಗಿದೆ ಎಂದು ತಿಳಿಸಿದರು.

ಇದೇ ಉದ್ದೇಶಗಳನ್ನು ಒಳಗೊಂಡ ಸಂವಿಧಾನವನ್ನು ನಾವು ಅಳವಡಿಸಿಕೊಂಡಿದ್ದೇವೆ. ಜಾತಿ, ಧರ್ಮ, ವರ್ಗ, ಭಾಷೆ, ಲಿಂಗ ಮತ್ತು ಪ್ರಾದೇಶಿಕ ಭೇದವಿಲ್ಲದ ಎಲ್ಲರೂ ಕಾನೂನಿನಲ್ಲಿ ಸಮಾನರು

ಎಲ್ಲರಿಗೂ ಕಾನೂನಿನ ಸಮಾನ ಅವಕಾಶಗಳು ಎಂದು ಸಾರಿರುವುದೇ ದ್ರಾವಿಡ ಚಳವಳಿ. ಬಹುತ್ವ, ಕಲ್ಯಾಣ ರಾಜ್ಯವೇ ದ್ರಾವಿಡ ಚಳವಳಿಯಾಗಿದೆ. ನೂರಕ್ಕೆ ನೂರು ಭಾಗ ಸಂವಿಧಾನವನ್ನು ಅನುಷ್ಠಾನ ಮಾಡಿದರೆ ದ್ರಾವಿಡ ಚಳವಳಿಯನ್ನು ಜಾರಿಗೊಳಿಸಿದಂತೆ ಎಂದರು.

ಈ ಗುರಿ ಸಾಧನೆಗಾಗಿ ಜಯಕುಮಾರ್ ಅವರು ಇಡೀ ಜೀವನ ಹೋರಾಟ ಮಾಡಿದ್ದರು. ಬರವಣಿಗೆ, ಮಾತು ಮಾತ್ರವಲ್ಲ. ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ, ಹಿರಿಯ ಪತ್ರಕರ್ತ ಎಸ್.ಆರ್. ಆರಾಧ್ಯ, ಡಾ. ಲೀಲಾ ಸಂಪಿಗೆ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳು ದಾಸರಾಗಿಯೇ ಬದುಕಬೇಕೆಂದು ಮನುಸ್ಥಿತಿಯಲ್ಲಿ ತುಂಬಿಬಿಟ್ಟಿದ್ದಾರೆ. ದುಡಿಯುವ ವರ್ಗ, ದ್ರಾವಿಡ ಚಳವಳಿಯನ್ನು ತುಳಿಯುವ ಕೆಲಸವಾಗುತ್ತಿದೆ. ಬುದ್ಧನ ಪ್ರತಿರೂಪವಾಗಿದ್ದ ಅಂಬೇಡ್ಕರ್ ಸಮಾನತೆಗಾಗಿ ಹೋರಾಡಿದರು. - ಬಿ.ಕೆ. ಶಿವರಾಂ, ನಿವೃತ್ತ ಪೊಲೀಸ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net