

ಸಾಗರ: ಇನ್ನೊಬ್ಬರ ಕಷ್ಟ ನೋಡಿ ಖುಷಿ ಪಡುವ ವರ್ಗ ಒಂದಾದರೆ, ಇನ್ನೊಬ್ಬರಿಗೆ ತಾವೇ ಕಷ್ಟ ಕೊಟ್ಟು ಸಂತೋಷಪಡುವ ವರ್ಗ ಇನ್ನೊಂದು. ಈ ಎರಡೂ ವರ್ಗದವರು ದುರ್ಜನರೇ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿದ್ದ ನವರಾತ್ರ ನಮಸ್ಯಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಇನ್ನೊಬ್ಬರ ನೋವು ಯಾರಿಗೂ ಅರ್ಥವಾಗುವುದಿಲ್ಲ. ಆದರೆ ತಮಗೇ ಆ ನೋವು ಬಂದಾಗ ಮಾತ್ರ ನೋವಿನ ವೇದನೆ ಅರ್ಥವಾಗಲಿದೆ ಎಂದರು.
ಎಲ್ಲ ರೀತಿಯ ದುರ್ಜನರಿಗೂ ಅಂತಿಮವಾಗಿ ನೋವಿನ ಸ್ಥಿತಿ ಬಂದೇ ಬರುತ್ತದೆ. ಇನ್ನೊಬ್ಬರಿಗೆ ಕಷ್ಟ ಕೊಟ್ಟವರು ಯಾವ ಕಾರಣಕ್ಕೂ ಕೊನೆಯಲ್ಲಿ ನೋವು ಅನುಭವಿಸಲೇಬೇಕು. ಅದೇ ರೀತಿ ಜಗಕ್ಕೆ ಕಂಟಕನಾಗಿ ಮೆರೆದ ಭಂಡಾಸುರನಿಗೆ ಇಂಥದ್ದೇ ಪರಿಸ್ಥಿತಿ ದೇವಿಯಿಂದ ಎದುರಾಯಿತು ಎಂದು ತಿಳಿಸಿದರು.
ಲಲಿತಾ ಮೂರ್ತಿಯನ್ನು ಮಂಗಲ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಹೊತ್ತು ತಂದು ಗಣಪತಿ ಕೆರೆಯಲ್ಲಿ ವಿಸರ್ಜಿಸಲಾಯಿತು. ವಿಜಯ ದಶಮಿ ದಿನದಂದು ಶಿಷ್ಯ ಹಿತಕ್ಕಾಗಿ ಶ್ರೀ ಮಠದಿಂದ ಶಿಷ್ಯಭಕ್ತರ ಮನೆಮನೆಗೆ ತೆರಳಿ ಪೂಜೆ ಕೈಗೊಳ್ಳಲಿರುವ ಸುವರ್ಣ ಪಾದುಕ ಸಂಚಾರಕ್ಕೆ ಚಾಲನೆ ನೀಡಲಾಯಿತು. ಶ್ರೀಗಳ ಸಾನ್ನಿಧ್ಯದಲ್ಲಿ ಶಂಖನಾದ ಹಾಗೂ ಮುತ್ತಿನಾರತಿ ಬೆಳಗಿ ಮಠದ ಶಾಸನತಂತ್ರದ ಪ್ರಮುಖರು ಮಹಾಮಂಡಲದ ಪ್ರಮುಖರ ಹೆಗಲಿಗೆ ಸಂಚಾರ ಪಾದುಕೆಯ ಪಲ್ಲಕ್ಕಿ ಹಸ್ತಾಂತರಿಸಿದರು.
ಶಿಷ್ಯಹಿತಂ ಪ್ರಮುಖ ವೈ.ವಿ.ಕೃಷ್ಣಮೂರ್ತಿ, ಸವಾರಿ ಪ್ರಮುಖ ಗಜಾನನ ಭಟ್, ಶಾಸನ ತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಶಾಂತರಾಮ ಹಿರೇಮನೆ, ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ ಇತರರಿದ್ದರು.