

ಮೈಸೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ನಾಗೇಂದ್ರ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಗೇಂದ್ರ ಅವರು ಕೊವಿಡ್-19 ಡ್ಯೂಟಿಯಲ್ಲಿ ಸಕ್ರಿಯರಾಗಿದ್ದರು. ಒತ್ತಡದ ನಡುವೆ ಕೆಲಸ ಮಾಡಬೇಕು. ಮೇಲಧಿಕಾರಿಗಳ ಕಿರುಕುಳ ಬೇರೆ ಎಂದು ಕುಟುಂಬದವರ ಬಳಿ ಅಳಲು ತೋಡಿಕೊಂಡಿದ್ದರು. ಇಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಗೇಂದ್ರ ಅವರ ಸಾವಿನ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆಯ ಸುದ್ದಿಕೇಳಿ ತುಂಬ ಬೇಸರವಾಯಿತು. ಪ್ರೀತಿಯ ಕರೊನಾ ವಾರಿಯರ್ಸ್ಗಳಲ್ಲಿ ಒಂದು ಮನವಿ ಮಾಡುತ್ತೇನೆ. ನಿಮಗೆ ಎಷ್ಟೇ ಒತ್ತಡಗಳಿದ್ದರೂ ನಿಮ್ಮ ಮೇಲಧಿಕಾರಿಗಳ ಜತೆ ಹೇಳಿಕೊಳ್ಳಿ. ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಿ-ಮೇಲ್ ವರ್ಕ್ ಆಗ್ತಿಲ್ಲ ಎಂದು ಗೋಳಾಡ್ತಿರುವಿರಾ? ಗೂಗಲ್ ನೀಡಿದೆ ಸ್ಪಷ್ಟನೆ… ನೋಡಿ…
ಒಂದೆಡೆ ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ..ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪ ಮಾಡಲಾಗುತ್ತಿದೆ. ವೈದ್ಯರ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರ ಅವರು ನೇರವಾಗಿ ಆರೋಪ ಮಾಡಿದ್ದು, ಮೈಸೂರು ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರೇ ನಾಗೇಂದ್ರ ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಂಜನಗೂಡು ಟಿಎಚ್ಒ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಜಿಪಂ ಸಿಇಒ ಅವರ ಮೇಲೆ ಒತ್ತಡ ಹಾಕುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಅದೂ ಕೂಡ ಹತ್ಯೆಗೆ ಸಮಾನವಾದದ್ದು. ಪ್ರಶಾಂತ್ ಕುಮಾರ್ ಮಿಶ್ರಾ ಕೊಡಗು ಜಿಲ್ಲೆಯಲ್ಲಿದ್ದಾಗಲೂ ಅವರ ವಿರುದ್ಧ ಜಾತಿ ನಿಂದನೆ ಕೇಸ್ ಇದೆ. ಪ್ರಶಾಂತ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಸಸ್ಪೆಂಡ್ ಮಾಡಿ ಎಂದು ಆಗ್ರಹಿಸಿದ್ದಾರೆ.
ನಾಗೇಂದ್ರ ಅವರ ಸಾವಿನ ಬೆನ್ನಲ್ಲೇ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಸಿಇಒ ಪ್ರಶಾಂತ್ ಮಿಶ್ರಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಎಚ್ಒ ಕಚೇರಿ ಎದುರು ನಾಗೇಂದ್ರ ಅವರ ಶವ ಇಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ದೇವರಾಜ ಅರಸು ಪ್ರಶಸ್ತಿ ವಿತರಣೆಗೆ ಗ್ರಹಣ, ಸಿಎಂ ವಿರುದ್ಧ ಸಿದ್ದರಾಮಯ್ಯ ಗರಂ
ಡಾ.ರವೀಂದ್ರ ಅವರಂತೂ ಏಕವಚನದಲ್ಲೇ ಬೈದಿದ್ದಾರೆ. ಶೇ.60ರಷ್ಟು ಹುದ್ದೆಗಳು ಖಾಲಿ ಇವೆ. ಇರುವವರು ಹೇಗೆ ಕೆಲಸ ಮಾಡಬೇಕು. ವೈದ್ಯರನ್ನು ಸವತಿ ಮಕ್ಕಳಂತೆ ನೋಡುತ್ತೀರಿ. ಆರು ತಿಂಗಳಿಂದ ಮನೆ ಬಿಟ್ಟು ಕೆಲಸ ಮಾಡಿದ್ದಾರೆ. ಆ್ಯಂಟಿಜನ್ ಕಿಟ್ ಟೆಸ್ಟ್ಗೆ ಟಾರ್ಗೆಟ್ ಕೊಟ್ಟಿದ್ದೀರಿ. ಇದೀಗ ಇಷ್ಟೊಳ್ಳೆ ವೈದ್ಯರಿಗೆ ಬೈದು, ಒತ್ತಡ ಹೇರಿ ಕೊಲೆ ಮಾಡಿದ್ದೀರಿ ಎಂದು ಏರುಧ್ವನಿಯಲ್ಲಿ ಜಿಪಂ ಅಧಿಕಾರಿಗಳಿಗೆ ಬೈದಿದ್ದಾರೆ. ಅಷ್ಟೇ ಅಲ್ಲ, ಜಿಪಂ ಸಿಇಒ ಪ್ರಶಾಂತ್ ಅವರನ್ನು ಸಸ್ಪೆಂಡ್ ಮಾಡುವವರೆಗೂ ನಾವು ಕೆಲಸ ಮಾಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ ; ಶಿರಾ ಉಪ ಚುನಾವಣೆ ಸ್ಪರ್ಧೆ ಶೀಘ್ರ ನಿರ್ಧಾರ
ಇಷ್ಟೆಲ್ಲ ಗಲಾಟೆಯಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಸಚಿವ ಡಾ. ಸುಧಾಕರ್ ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನಾಗೇಂದ್ರ ಸಾವಿನ ನೋವು ಎಂಥದ್ದು ಎಂದು ವೈದ್ಯನಾಗಿ ನನಗೂ ಅರ್ಥವಾಗುತ್ತದೆ. ಶಾಂತಿ ಕಾಪಾಡಿ. ಕೊವಿಡ್ 19 ಸಂಕಷ್ಟ ಕಾಲದಲ್ಲಿ ಸಂಯಮದಿಂದ ವರ್ತಿಸಿ. ಅವರ ಸಾವಿನ ತನಿಖೆಗೆ ಆದೇಶ ನೀಡಿದ್ದೇನೆ. ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.