ಈ ವರ್ಷ ಚಳಿಗಾಲ 16 ದಿನ ಮಾತ್ರ!; ಚಳಿ ತೀವ್ರತೆ ಗರಿಷ್ಠ ಮಟ್ಟ ಮುಟ್ಟುವುದಿಲ್ಲ

Winter
Published on

ಬೆಂಗಳೂರು: ಸಾಮಾನ್ಯ ವರ್ಷಕ್ಕಿಂತ ಈ ವರ್ಷ ತುಸು ಭಿನ್ನವಾಗಿದ್ದು, ಈ ವರ್ಷ ಕೇವಲ 16 ದಿನ ಮಾತ್ರ ಅಧಿಕ ಚಳಿ ಇರಲಿದೆ. ವಾತಾವರಣ ಉಷ್ಣಾಂಶದ ಇಳಿಕೆಯ ಅವಧಿ ಸಾಮಾನ್ಯ ವರ್ಷಗಳಲ್ಲಿ 40-45 ದಿನಗಳು ಇರುತ್ತದೆ. ಆದರೆ, ಈ ಬಾರಿ 16 ದಿನಗಳು ಮಾತ್ರ ಇರಲಿವೆ. ಈ ಹಿನ್ನೆಲೆಯಲ್ಲಿ ಚಳಿ ತೀವ್ರತೆ ಗರಿಷ್ಠ ಮಟ್ಟ ಮುಟ್ಟುವುದಿಲ್ಲ. ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ 10-12, ಒಳನಾಡಿನ ಪ್ರದೇಶಗಳಲ್ಲಿ 12-16 ಹಾಗೂ ಘಟ್ಟ ಪ್ರದೇಶಗಳಲ್ಲಿ 8-12 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.

15-20 ದಿನಗಳು ಮುಂದೂಡಿಕೆ: ಈ ಬಾರಿ ಹಿಂಗಾರು ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ಚಳಿಗಾಲ ಆರಂಭ 15-20 ದಿನಗಳು ಮುಂದೂಡಿಕೆಯಾಗಿತು. ಇದರಿಂದ ವಾತಾವರಣದ ಉಷ್ಣಾಂಶ ಇಳಿಕೆಯ ಆರಂಭ ದಿನಗಳು ಮುಂದೂಡಿಕೆಯಾದವು ಎಂದು ಹವಾಮಾನ ವೈಪರಿತ್ಯ ವಿಜ್ಞಾನಿ ಡಾ.ಎಂ.ಬಿ.ರಾಜೇಗೌಡ ಹೇಳಿದ್ದಾರೆ. ಅ.25ರಿಂದ ಡಿ.1ರ ವರೆಗೆ ಫೆಸಿಫಿಕ್ ಸಾಗರದಲ್ಲಿ ಸತತವಾಗಿ ಉಂಟಾದ ದಟ್ಟನೆಯ ಮೋಡಗಳು ಬಂಗಾಳಕೊಲ್ಲಿ ಮೂಲಕ ತಮಿಳುನಾಡು ಹಾಗೂ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಸಿದ್ದವು.

ತಾಪಮಾನ ಇಳಿಕೆ: ರಾಜ್ಯದಲ್ಲಿ ಚಳಿ ಶುರುವಾದ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನದಲ್ಲಿ 4-6 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಮಡಿಕೇರಿಯಲ್ಲಿ 6, ಕಲಬುರಗಿ ಮತ್ತು ವಿಜಯನಗರದಲ್ಲಿ ತಲಾ 5, ಬಳ್ಳಾರಿ, ಬೆಂಗಳೂರು, ಮಂಡ್ಯ, ಮೈಸೂರಿನಲ್ಲಿ ತಲಾ 4, ಶಿವಮೊಗ್ಗ, ಚಿತ್ರದುರ್ಗದಲ್ಲಿ ತಲಾ 3, ಬಾಗಲಕೋಟೆ, ಗದಗ, ಹಾಸನ, ಕಾರವಾರದಲ್ಲಿ ತಲಾ 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಳಿಕೆಯಾಗಿದೆ. ಹಾಸನದಲ್ಲಿ 7 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ರಾಯಚೂರು, ಮಂಡ್ಯ, ಮಡಿಕೇರಿ, ಕಲಬುರಗಿ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ತಲಾ 2 ಡಿಗ್ರಿ ಇಳಿಮುಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net