ಈ ವರ್ಷವೇ ಭಾರತ ವಿಶ್ವದ 4ನೇ ದೊಡ್ಡ ಆರ್ಥಿಕತೆ; 2028ರೊಳಗೆ ಮೂರನೇ ಸ್ಥಾನಕ್ಕೆ

ವಿಜಯವಾಣಿ (6)
Published on

ನವದೆಹಲಿ: ಪ್ರಸಕ್ತ ವರ್ಷದಲ್ಲೇ (2025) ಭಾರತವು ಜಪಾನನ್ನು ಹಿಂದಿಕ್ಕಿ ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಿಶ್ವ ಆರ್ಥಿಕ ದೃಷ್ಟಿಕೋನ (ವರ್ಲ್ಡ್ ಎಕನಾಮಿಕ್ ಔಟ್​ಲುಕ್) 2025ರ ಇತ್ತೀಚಿನ ವರದಿ ತಿಳಿಸಿದೆ.

2025-26ನೇ ಆರ್ಥಿಕ ವರ್ಷದಲ್ಲಿ ಭಾರತದ ನಾಮಿನಲ್ ಜಿಡಿಪಿ (ಹಣದುಬ್ಬರಕ್ಕೆ ಹೊಂದಾಣಿಕೆ ಮಾಡದೆ ಲೆಕ್ಕ ಹಾಕಲಾದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ) 4,187 ಶತಕೋಟಿ ಡಾಲರ್ ಆಗುವ ನಿರೀಕ್ಷೆ ಇದೆ. ಇದು ಜಪಾನ್​ನ 4,186 ಶತಕೋಟಿ ಡಾಲರ್​ಗಿಂತ ಜಾಸ್ತಿ ಎಂದು ವರದಿಯಲ್ಲಿ ವಿವರಿಸಲಾಗಿದೆ. ಈಗ ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯಾಗಿದ್ದು, 2028ರ ವೇಳೆಗೆ ಜರ್ಮನಿಯನ್ನೂ ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ. ಆಗ ಭಾರತದ ಜಿಡಿಪಿ 5,584 ಶತಕೋಟಿ ಡಾಲರ್ ಆಗಲಿದ್ದು, ಜರ್ಮನಿಯ 5,251 ಶತಕೋಟಿ ಡಾಲರ್​ಗಿಂತ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. 2027ರ ವೇಳೆಗೆ ಭಾರತ 5,069 ಶತಕೋಟಿ ಡಾಲರ್ ಜಿಡಿಪಿಯೊಂದಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಅಮೆರಿಕ ಮತ್ತು ಚೀನಾ ಜಗತ್ತಿನ ಮೊದಲ ಮತ್ತು ಎರಡನೇ ಅತಿ ದೊಡ್ಡ ಆರ್ಥಿಕತೆಗಳಾಗಿ ಇನ್ನೂ ಒಂದು ದಶಕ ಕಾಲ ಮುಂದುವರಿಯಲಿವೆ ಎಂದು ಐಎಂಎಫ್ ವರದಿಯಲ್ಲಿ ವಿವರಿಸಲಾಗಿದೆ.

ಪ್ರಸಕ್ತ ವರ್ಷ ಆರ್​ಬಿಐನಿಂದ ಶೇ. 1.5 ರೆಪೊ ಕಡಿತ ನಿರೀಕ್ಷೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್​ಬಿಐ ಶೇಕಡ 1.5ರಷ್ಟು ರೆಪೊ ದರ ಕಡಿತಗೊಳಿಸುವ ನಿರೀಕ್ಷೆ ಇದೆ ಎಂದು ಎಸ್​ಬಿಐ ಸಂಶೋಧನಾ ವರದಿ ಸೋಮವಾರ ತಿಳಿಸಿದೆ. ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದ ಮಾರ್ಚ್​ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ 67 ತಿಂಗಳ ಕನಿಷ್ಠ ಮಟ್ಟವಾದ ಶೇಕಡ 3.34ರಷ್ಟು ದಾಖಲಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರಾಸರಿ ಹಣದುಬ್ಬರ ಶೇಕಡ 4ಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇದೆ. ಮೊದಲ ತ್ರೖೆಮಾಸಿಕದಲ್ಲಿ ಶೇಕಡ 3ಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಲಾಗಿದೆ. ದೇಶದ ನಾಮಿನಲ್ ಜಿಡಿಪಿ ಬೆಳವಣಿಗೆ ಶೇಕಡ 9ರಿಂದ ಶೇಕಡ 9.5ರಷ್ಟು ಇರಬಹುದು. ಜೂನ್ ಮತ್ತು ಆಗಸ್ಟ್​ನಲ್ಲಿ ಶೇಕಡ 0.75ರಷ್ಟು ರೆಪೊ ಕಡಿತ ಮಾಡಬಹುದು. ದ್ವಿತೀಯಾರ್ಧದಲ್ಲಿ ಶೇಕಡ 0.50ರಷ್ಟು ಕಡಿಮೆ ಮಾಡಬಹುದು, ಒಟ್ಟು ಕಡಿತ ಶೇಕಡ 1.25ರಷ್ಟಾಗಲಿದೆ. ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಶೇಕಡ 0.25ರಷ್ಟು ಕಡಿತ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net