

ಇಂದೋರ್: ಯಾವುದೇ ಕೆಲಸ ಮಾಡಿದರೂ ಅದರಲ್ಲೇ ಖುಷಿ ಕಾಣಬೇಕು ಎಂಬ ಹಿರಿಯರ ಮಾತಿಗೆ ಉದಾಹರಣೆಯಾಗಿ ಮಧ್ಯಪ್ರದೇಶದ ಇಂದೋರ್ನ ಸಂಚಾರಿ ಪೊಲೀಸ್ ಒಬ್ಬರು ನಿಂತಿದ್ದಾರೆ.
ಪ್ರತಿನಿತ್ಯ ವಾಹನಗಳ ಶಬ್ದದ ಕಿರಿಕಿರಿ, ಹಾನಿಕಾರಕ ಹೊಗೆ ಮತ್ತು ವಾಹನ ದಟ್ಟಣೆಯನ್ನು ನೋಡಿ...ನೋಡಿ ಬಹುತೇಕ ಸಂಚಾರಿ ಪೇದೆಗಳ ಮುಖ ಬಸವಳಿದು, ನಗು ಮರೆಯಾದಂತೆ ಕಾಣುತ್ತಿರುತ್ತದೆ. ಆದರೆ, ಇಂದೋರ್ನ ಸಂಚಾರಿ ಪೇದೆ ರಂಜೀತ್ ಸಿಂಗ್ ಕೊಂಚ ವಿಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ, ಡ್ಯಾನ್ಸ್ ಮಾಡುತ್ತಾ ಸಂಚಾರ ನಿರ್ವಹಣೆ ಮಾಡುವುದರೊಂದಿಗೆ ತಾವು ಖುಷಿಯಾಗಿ ವಾಹನ ಸವಾರರ ಮನವನ್ನು ತಣಿಸುತ್ತಿದ್ದಾರೆ.
ಅಂದಹಾಗೆ ರಂಜೀತ್ ಅವರು ಸಂಚಾರ ನಿರ್ವಹಣೆ ವೇಳೆ ಹಾಕುವ ಹೆಜ್ಜೆ, ಪಾಪ್ ಸಂಗೀತ ಲೋಕದ, ಎಂದೂ ಮರೆಯದ ದಂತಕತೆ ಮೈಕಲ್ ಜಾಕ್ಸನ್ ಅವರ ಮೂನ್ ವಾಕ್ ಸ್ಟೆಪ್ಸ್. ಕಳೆದ 16 ವರ್ಷಗಳಿಂದ ರಂಜೀತ್ ಅವರು ತಮ್ಮ ವೃತ್ತಿಯಲ್ಲಿ ಡ್ಯಾನ್ಸ್ ಅಳವಡಿಸಿಕೊಂಡು ಸೇವೆ ಮಾಡುತ್ತಾ ಖುಷಿ ಕಾಣುತ್ತಾ ಬಂದಿದ್ದಾರೆ. ಹೀಗಾಗಿಯೇ ರಂಜೀತ್ ಅವರು ಸೋಶಿಯಲ್ ಮೀಡಿಯಾ ಸ್ಟಾರ್ ಜತೆಗೆ ಸ್ಥಳೀಯ ಸೆಲೆಬ್ರಿಟಿಯು ಆಗಿದ್ದಾರೆ. ಅನೇಕ ಮಂದಿ ರಂಜೀತ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ.
ತಮ್ಮ ಕರ್ತವ್ಯದ ಬಗ್ಗೆ ಮಾತನಾಡಿರುವ ರಂಜೀತ್, ಸುಮಾರು 16 ವರ್ಷದಿಂದ ಕರ್ತವ್ಯದಲ್ಲಿ ಡ್ಯಾನ್ಸ್ ಅಳವಡಿಕೊಂಡಿದ್ದೇನೆ. ಸ್ಥಳವೊಂದರಲ್ಲಿ ಅಪಘಾತ ಸಂಭವಿಸಿದ್ದು, ಜನದಟ್ಟನೆ ನಿಯಂತ್ರಿಸಬೇಕೆಂಬ ಸಂದೇಶವೊಂದು ನನ್ನ ಸಂವಹನ ಸಾಧನಕ್ಕೆ ಬಂದಿತು. ತಕ್ಷಣ ನಾನು ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ, ನನಗೆ ಶಾಕ್ ಆಯಿತು. ಏಕೆಂದರೆ, ಅಪಘಾತದಲ್ಲಿ ಮೃತಪಟ್ಟವನು ನನ್ನ ಸ್ನೇಹಿತನಾಗಿದ್ದ. ಇದೇ ತಲ್ಲಣದಿಂದ ನಾನು ರಸ್ತೆಯಲ್ಲಿ ಅಡ್ಡಾಡುವಾಗ, ನನ್ನ ಚಲನೆಯಿಂದ ಜನರು ನಿಲ್ಲುತ್ತಾರೆಂದು ನನ್ನ ಮೇಲಾಧಿಕಾರಿಗಳು ಹೇಳಿದರು. ಅಂದಿನಿಂದ ನನ್ನ ವೃತ್ತಿಗೆ ಮೂನ್ ವಾಕ್ ಸೇರಿಕೊಂಡೆ ಎನ್ನುತ್ತಾರೆ ರಂಜೀತ್.
ವಿದ್ಯಾರ್ಥಿ ದೆಸೆಯಿಂದಲೂ ರಂಜೀತ್ ಅವರಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟವಿತ್ತಂತೆ. ಬಡತನದಿಂದಾಗಿ ಡ್ಯಾನ್ಸ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಇಂದು ಡ್ಯಾನ್ಸ್ನಿಂದಲೇ ಸಂಚಾರಿ ನಿರ್ವಹಣೆಯನ್ನು ಉತ್ತಮವಾಗಿ ಮಾಡುತ್ತಿದ್ದೇನೆ ಎಂದಿರುವ ರಂಜೀನ್, ವಾಹನ ಸವಾರರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದಾರೆ. ಜನರು ಕೆಲವೊಮ್ಮೆ ಕೆಟ್ಟ ಮೂಡ್ನಿಂದ ರಸ್ತೆಗೆ ಇಳಿದಿರುತ್ತಾರೆ. ಆದರೆ, ನನ್ನ ಡ್ಯಾನ್ಸ್ ನೋಡಿದಾಗ ಮನಸಿನ ಭಾರ ಕಡಿಮೆಯಾಗುತ್ತದೆ ಎಂದಿದ್ದಾರೆ.
ರಂಜೀತ್ ಅವರ ಕೆಲಸವನ್ನು ಹೊಗಳಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಛೋಬೆ, ರಂಜೀತ್ ಅವರ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಅವರನ್ನು ಎಲ್ಲಿಗೆ ನಿಯೋಜಿಸಿದರೂ ಸಂಚಾರ ಮೃದುವಾಗಿ ಸಾಗುತ್ತದೆ. ಯಾರನ್ನೇ ತಡೆದರೂ ಅವರು ರಂಜೀತ್ ಜತೆಯಲ್ಲಿ ಜಗಳ ಆಡುವುದಿಲ್ಲ ಎಂದಿದ್ದಾರೆ.
ಅನೇಕ ಟಿವಿ ಕಾರ್ಯಕ್ರಮಗಳಲ್ಲೂ ರಂಜೀತ್ ಕಾಣಿಸಿಕೊಂಡಿದ್ದಾರೆ. ಉತ್ತಮ ಸಂಚಾರಿ ನಿರ್ವಹಣೆಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ಡ್ಯಾನ್ಸ್ ಮಾಡುತ್ತಾ ಸಂಚಾರಿ ನಿರ್ವಹಣೆ ಮಾಡುವುದನ್ನು ಹೊರತುಪಡಿಸಿದರೆ, ಇತರೆ ಸಂಚಾರಿ ಪೇದೆಗಳಿಗೆ ಚೆನ್ನಾಗಿ ತರಬೇತಿಯನ್ನು ಸಹ ನೀಡುತ್ತಾರೆ. (ಏಜೆನ್ಸೀಸ್)