

ಬೆಂಗಳೂರು: ರಮಜಾನ್ ಮಾಸದ ನಿಮಿತ್ತ ಈ ಬಾರಿ ಮಸೀದಿ, ದರ್ಗಾ ಹಾಗೂ ಇಮಾಮ್ ಬಾರಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ಭೋಜನ ಕೂಟ (ದಾವತ್/ ಇಫ್ತಾರ್) ಏರ್ಪಡಿಸುವಂತಿಲ್ಲ. ಮಸೀದಿಗಳಲ್ಲಿ ಫಲಾಹಾರ ತಯಾರಿಸಿ ಓಣಿಗಳಲ್ಲಿ ಹಂಚುವಂತಿಲ್ಲ.
ಈ ಕುರಿತು ರಾಜ್ಯ ಅಲ್ಪಸಂಖ್ಯಾತರ, ವಕ್ಫೃ್ ಹಾಗೂ ಹಜ್ ಇಲಾಖೆ ಸ್ಪಷ್ಟವಾದ ಆದೇಶ ಹೊರಡಿಸಿದೆ.
ಕರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಜಾರಿಯಿರುವ ಹಿನ್ನೆಲೆಯಲ್ಲಿ ಮೇ 3ರವರೆಗೆ ಯಾವುದೆಲ್ಲ ಪಾಲಿಸಬೇಕು ಎನ್ನುವ ಕುರಿತು ಮಾರ್ಗಸೂಚಿ ಹೊರಡಿಸಿದ್ದು, ಕರೊನಾಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಹಾಗೂ ವಿಶೇಷ (ಜುಮ್ಮಾ, ತರವ್ಹೀ) ಪ್ರಾರ್ಥನೆ ಇಲ್ಲ. ಸಾರ್ವಜನಿಕ ಭಾಷಣ ಮಾಡುವಂತಿಲ್ಲ. ಮಸೀದಿಗಳ 5 ಜನ ಸಿಬ್ಬಂದಿಗೆ ಪ್ರಾರ್ಥನೆ ಮಾಡಲು ಅವಕಾಶವಿದ್ದು, ಧ್ವನಿವರ್ಧಕ ಬಳಸುವಂತಿಲ್ಲ. ಕಡಿಮೆ ಸೌಂಡ್ ಬಳಸಿ ಆಜಾನ್ ಮಾಡಬಹುದು. ಅದರಲ್ಲಿ ನಸುಕಿಗೆ ತಹರೀ ಆರಂಭ, ಸಂಜೆಯ ಇಫ್ತಾರ್ ಬಗ್ಗೆ ಮಾಹಿತಿ ನೀಡಬಹುದು.
ಬೆಳಗ್ಗೆ ಮತ್ತು ಸಂಜೆ ಜನ ಸಮೂಹ ಸೇರಿಸಿ ಭೋಜನ ಕೂಟ ಏರ್ಪಡಿಸುವಂತಿಲ್ಲ. ಮಸೀದಿಗಳಲ್ಲಿ ಜ್ಯೂಸ್, ಫಲಾಹಾರ ತಯಾರಿಸಿ ಓಣಿಗಳಲ್ಲಿ ಹಂಚುವಂತಿಲ್ಲ. ಮಸೀದಿ ಹಾಗೂ ದರ್ಗಾ ಬಳಿ ಆಹಾರ ಮತ್ತು ಹಣ್ಣಿನ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ಸೂಚಿಸಿದೆ.
ಧರ್ಮಗುರುಗಳ ಒಪ್ಪಿಗೆ: ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಧರ್ಮ ಗುರುಗಳು ಈ ಎಲ್ಲ ಸೂಚನೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ವಕ್ಫ್ ಮಂಡಳಿ ಕಾರ್ಯದರ್ಶಿ ಇಬ್ರಾಹಿಂ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. ದಿನಕ್ಕೆ ನಾಲ್ಕು ಬಾರಿ ಕರೊನಾ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಲೌಡ್ ಸ್ಪೀಕರ್ ಬಳಸಲು ಅವಕಾಶ ನೀಡಲಾಗಿದೆ ಎಂದರು.
ನವದೆಹಲಿಯ ತಬ್ಲಿಘಿ ಜಮಾತ್ಗೆ ರಾಜ್ಯದಿಂದ 698 ಜನರು ಹೋಗಿದ್ದು, ಇದರಲ್ಲಿ 28 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ತಪ್ಪು ಸಂದೇಶ, ಭೇದಭಾವ ಸರಿಯಲ್ಲವೆಂದು ಇಬ್ರಾಹಿಂ ಹೇಳಿದರು.
ಮನೆಯಲ್ಲೇ ಪ್ರಾರ್ಥಿಸಿ: ರಮಜಾನ್ ಮಾಸ ಏ.25ರಿಂದ ಶುರುವಾಗಲಿದ್ದು, ಮನೆಯಲ್ಲೇ ಪ್ರಾರ್ಥಿಸಿ, ಅಲ್ಲಾನಿಗೆ ಪ್ರಿಯವಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರಗಳ ಸೂಚನೆಗಳನ್ನು ಪಾಲಿಸಿರಿ, ಅನಾಹುತಕ್ಕೆ ದಾರಿ ಮಾಡಿಕೊಡುವುದು ಬೇಡವೆಂದು ಮುಸ್ಲಿಂ ಸಮುದಾಯದ ಜನರಿಗೆ ತಿಳಿ ಹೇಳಲಾಗಿದೆ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಯುಸ್ೂ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಸೀದಿ, ದರ್ಗಾಗಳಿಗೆ ಹೋಗುವುದು ಮುಖ್ಯವಲ್ಲ, ಜೀವ ಮುಖ್ಯ. ಬಡವರಿಗೆ ಸಹಾಯ ಮಾಡಿ. ಆದರೆ, ಜನ ಸಮೂಹ ಸೇರಿಸಬೇಡಿ ಎಂದು ಮನವಿ ಮಾಡಿಕೊಂಡರು.