ಈ ಬಾರಿ ಭತ್ತದ ಬೆಳೆ ಕ್ಷೀಣಿಸುವ ಸಾಧ್ಯತೆ ಇದೆ

D.15 MDG 1P1
ಮೂಡಿಗೆರೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕಿ ನಯನ ಮೋಟಮ್ಮ ಮಾತನಾಡಿದರು. ಮಾಜಿ ಸಚಿವೆ ಮೋಟಮ್ಮ, ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಇದ್ದರು.
Published on

ಮೂಡಿಗೆರೆ: ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ನನ್ನನ್ನು ವಿಧಾನಸಭೆಗೆ ಆಯ್ಕೆಮಾಡಿದ್ದು, ಅವರ ಆಶಯಗಳಿಗೆ ಧಕ್ಕೆಯಾಗದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಮಂಗಳವಾರ ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಾರಿ ಮಳೆ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ. ಕೃಷಿಗೆ ನೀರಿನ ಕೊರತೆ ಇದೆ. ಬಿತ್ತನೆ ಮಾಡಲು ಸಾಧ್ಯವಾಗದೆ ರೈತರು ಆಕಾಶ ನೋಡುವಂತಾಗಿದೆ. ಈ ಬಾರಿ ಭತ್ತದ ಬೆಳೆ ಕ್ಷೀಣಿಸುವ ಸಾಧ್ಯತೆ ಇದೆ ಎಂದರು.
ಮಳೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿಗೂ ತೊಂದರೆಯಾಗುವ ಆತಂಕವಿದೆ. ಮಳೆ ಕೊರತೆಗೆ ಬದಲಿ ವ್ಯವಸ್ಥೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರೈತರ ಕೃಷಿ ಉಳಿಸಿಕೊಳ್ಳುವ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು. ಕುಡಿಯುವ ನೀರಿಗೆ ತೊಂದರೆಯಾಗದಂಯೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲಿ ಮುಂದುವರಿದಿದ್ದು, ತಾರತಮ್ಯ ಮಾಡದಂತೆ ಎಚ್ಚರವಹಿಸಬೇಕಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು. ಶಿಕ್ಷಣ ಕುಂಠಿತಗೊಂಡರೆ ಮಕ್ಕಳ ಮುಂದಿನ ಬದುಕು ನಾಶವಾಗಲಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ನಾನು ಕೂಲಿ ಕಾರ್ಮಿಕ ಕುಟುಂಬದಿಂದ ಬಂದಿದ್ದು, ಹಿಂದಿನ ಕಷ್ಟದ ದಿನದ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ. ಕೂಲಿ ಕೆಲಸ ಕೀಳೆಂಬ ಭಾವನೆ ಬೇಡ. ನಾನು ಸಚಿವೆಯಾಗಿದ್ದಾಗ ಮಹಿಳೆಯರ ಸ್ವಸಹಾಯ ಗುಂಪುಗಳನ್ನು ರಚಿಸಿದ್ದರಿಂದ ಮಹಿಳೆಯರು ಇಂದು ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರ ಅರ್ಥಿಕ ಅಭಿವೃದ್ಧಿಗೆ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪುಗಳು ಸಹಕಾರಿಯಾಗಿದೆ ಎಂದರು.
ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಧ್ವಜಾರೋಹಣ ನೆರವೇರಿಸಿದರು. ಪಪಂ ಸದಸ್ಯರಾದ ಎಚ್.ಪಿ.ರಮೇಶ್, ಎಂ.ಎ.ಹಂಝ, ಮನೋಜ್, ಖುರ್ಶಿದಾ ಭಾನು, ಆಶಾ ಮೋಹನ್, ಕಮಲಾಕ್ಷಿ, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net