ಈ ಬಾರಿ 130 ಕಿ.ಮೀ. ದಸರಾ ದೀಪಾಲಂಕಾರ

Dasara
ಸಾಂದರ್ಭಿಕ ಚಿತ್ರ
Published on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡಲು ಸೆಸ್ಕ್ ಮುಂದಾಗಿದ್ದು, ಈ ಬಾರಿ 130 ಕಿ.ಮೀ. ದೀಪಾಲಂಕಾರದ ಜತೆಗೆ ಇದೇ ಮೊದಲ ಬಾರಿಗೆ ಡ್ರೋನ್ ಶೋ ಏರ್ಪಡಿಸಲಾಗಿದೆ.

ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯಲ್ಲಿ ಸೋಮವಾರ ಸಂಜೆ ದಸರಾ ವಿದ್ಯುತ್ ದೀಪಾಲಂಕಾರ ಪೋಸ್ಟರ್ ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ದೀಪಾಲಂಕಾರದ ಬಗ್ಗೆ ವಿವರಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ದೀಪಾಲಂಕಾರ ಇರಲಿದ್ದು, ನಗರದ ಪ್ರಮುಖ ರಸ್ತೆಗಳು ಸೇರಿ 130 ಕಿ.ಮೀ. ಹಾಗೂ 100 ವೃತ್ತಗಳಲ್ಲಿ ದೀಪಾಲಂಕಾರ ಇರಲಿದೆ. ಜತೆಗೆ ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ 65 ವಿವಿಧ ಪ್ರತಿಕೃತಿ ಇರಲಿದ್ದು, ಇದರಲ್ಲಿ ಪ್ರಜಾಪ್ರಭುತ್ವ ಸಾಗಿಬಂದ ಹಾದಿ, ಭುವನೇಶ್ವರಿ ದೇವಿ, ಮೈಸೂರು ಆಳಿದ ರಾಜರ ಪ್ರತಿಕೃತಿಗಳು ಇರಲಿವೆ ಎಂದು ತಿಳಿಸಿದರು.

ಈ ವರ್ಷ 21 ದಿನಗಳ ಕಾಲ ದೀಪಾಲಂಕಾರ ಇರಲಿದ್ದು, ಅ.3ರಂದು ಸಂಜೆ 6.30ಕ್ಕೆ ಹಸಿರು ಚಪ್ಪರದ ಬಳಿ ಇಂಧನ ಸಚಿವರು ದೀಪಾಲಂಕಾರಕ್ಕೆ ಚಾಲನೆ ನೀಡಲಿದ್ದಾರೆ. ಒಟ್ಟಾರೆ 21 ದಿನಗಳ ದೀಪಾಲಂಕಾರಕ್ಕೆ 6.50 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ಭಾಗವಾಗಿ 2881 ಕಿ.ವ್ಯಾ. ಹಾಗೂ ವಿದ್ಯುತ್ ಬಳಕೆಯ ಅಂದಾಜು ಪ್ರಮಾಣ 242012 ಯೂನಿಟ್‌ಗಳು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net