

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಕೋರ್ಟ್ ದರ್ಶನ್ರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ಪವಿತ್ರಾರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತು. ಇಂದಿಗೆ (ಜೂ.22) ದರ್ಶನ್ ಎರಡು ದಿನದ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಆದೇಶಕ್ಕಾಗಿ ಇಂದು ಕೋರ್ಟ್ಗೆ ಹಾಜರುಪಡಿಸಲಾಗುವುದು.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಲ್ಲ ಆರೋಪಿಗಳು ಜೈಲುಪಾಲಾಗುವ ಸಾಧ್ಯತೆ ಇದೆ. ಇದೆಲ್ಲದರ ಮಧ್ಯೆ ಆರೋಪಿ ದರ್ಶನ್ ಬಗ್ಗೆ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇನ್ನು ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್, ದರ್ಶನ್ಗೆ ಮತ್ತು ಇತರೆ ಆರೋಪಿಗಳನ್ನು ನಾರ್ಕೋ ಅನಾಲಿಸಿಸ್ ಟೆಸ್ಟ್ಗೆ ಒಳಪಡಿಸಿದರೆ, ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ.
"ನಾರ್ಕೋ ಅನಾಲಿಸಿಸ್ಗೆ ಒಳಪಡಿಸಿದ್ರೆ, ಅವರು ಸತ್ಯ ಬಾಯ್ಬಿಡಬಹುದು. ಇದರಲ್ಲಿ ನಾಲ್ಕರಿಂದ ಐದು ರೀತಿಯ ಟೆಸ್ಟ್ಗಳಿವೆ. ಇದನ್ನು ಹಿರಿಯ ವೈದ್ಯರು ಅಥವಾ ಅವರ ಆಸ್ಪತ್ರೆಗಳಲ್ಲಿ ನಡೆಸುತ್ತಾರೆ. ಈ ಕೇಸ್ನಲ್ಲಿ ದರ್ಶನ್ ಸದ್ಯ ಕಸ್ಟಡಿಯಲ್ಲಿದ್ದಾರೆ. ಒಂದು ಇಂಜೆಕ್ಷನ್ ಕೊಟ್ಟರೆ, ಅದರಲ್ಲಿ ದೊಡ್ಡ ಪ್ರಕ್ರಿಯೆಯೇ ಅಡಗಿದೆ. ಈ ಟೆಸ್ಟ್ ಮಾಡುವ ಮುನ್ನ ವ್ಯಕ್ತಿಯ ದೇಹದಲ್ಲಿ ಬಿಪಿ, ಹಾರ್ಟ್ಬೀಟ್ ರೇಟ್, ಕಿಡ್ನಿ ಇದೆಲ್ಲವನ್ನು ಪರೀಕ್ಷಿಸಿ, ನಂತರ ಎಷ್ಟು ಪ್ರಮಾಣದಲ್ಲಿ ಕೊಡಬಹುದು ಎಂದು ನಿರ್ಧರಿಸುತ್ತಾರೆ" ಎಂದು 'ವಿಜಯವಾಣಿ' ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಇದನ್ನು ಕೊಟ್ಟ ಬಳಿಕ ಆ ವ್ಯಕ್ತಿ ಏನೇನೋ ಮಾತನಾಡಲು ಪ್ರಾರಂಭಿಸುತ್ತಾರೆ. ಆಗ ಏನಾಗುತ್ತದೆ ಎಂದರೆ..." ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.