

ಅಯೋಧ್ಯೆ: ರಾಮಮಂದಿರ ಭೂಮಿ ಪೂಜೆ ಹತ್ತಿರ ಬರುತ್ತಿದೆ. 200 ಮಂದಿಗೆ ಮಾತ್ರ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ಆದರೆ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರಿಗೆ ಆಹ್ವಾನ ನೀಡುತ್ತಿಲ್ಲ. ಅವರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಕುತೂಹಲಕ್ಕೆ ಕಾರಣವಾಗಿತ್ತು.
ಆದರೆ ಎಲ್.ಕೆ.ಆಡ್ವಾಣಿಯವರಿಗೆ ಭೂಮಿ ಪೂಜೆಗೆ ಯಾಕೆ ಆಹ್ವಾನ ನೀಡಲಾಗುತ್ತಿಲ್ಲ ಎಂಬುದನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಆಡ್ವಾಣಿಯವರ ಪಾತ್ರ ದೊಡ್ಡದು. ಅವರಿಗೆ ಆಹ್ವಾನ ನೀಡದೆ ಇರುವುದಕ್ಕೆ ಕರೊನಾ ವೈರಸ್ ನಿಯಂತ್ರಣಾ ಮಾರ್ಗಸೂಚಿ ಕಾರಣ ಹೊರತು ಬೇರೇನೂ ಇಲ್ಲ. ಭೂಮಿಪೂಜೆ ಸಮಾರಂಭದಲ್ಲಿ 90 ವರ್ಷಕ್ಕಿಂತ ಮೇಲ್ಪಟ್ಟವರು ಯಾರೂ ಪಾಲ್ಗೊಳ್ಳುವಂತಿಲ್ಲ. ಹಾಗೇ, ಆಡ್ವಾಣಿಯವರಿಗೆ 92ವರ್ಷವಾಗಿದೆ. ಅವರು ಹೇಗೆ ಇಲ್ಲಿಗೆ ಆಗಮಿಸುತ್ತಾರೆ? ಎಂದು ಚಂಪತ್ ರಾಯ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನ ಹೊಸ ಕರೊನಾ ಪ್ರಕರಣಗಳು, ಡಿಸ್ಚಾರ್ಜ್ ಆದವರ ಸಂಖ್ಯೆ 4000ಕ್ಕೂ ಅಧಿಕ
ದೇಶದಲ್ಲಿ ಅನ್ಲಾಕ್ ಜಾರಿಯಲ್ಲಿದ್ದರೂ ವಯಸ್ಸಾದವರು ಮನೆಯಲ್ಲೇ ಇರಿ ಎಂದು ಸರ್ಕಾರ ಹೇಳಿದೆ. ಮಾರ್ಗಸೂಚಿಯಲ್ಲೂ ಅದನ್ನೇ ಉಲ್ಲೇಖ ಮಾಡಲಾಗಿದೆ. ಅಯೋಧ್ಯೆಯಲ್ಲಿ ಇತ್ತೀಚೆಗೆ ಹಲವು ಕರೊನಾ ಕೇಸ್ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಶಿ ಭೂಮಿಪೂಜೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿಯವರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಹಾರೈಸುತ್ತೇನೆ: ಶಿವಸೇನೆ ಮುಖಂಡ ಸಂಜಯ್ ರಾವತ್
ಹಾಗೇ ಚಂಪತ್ ರಾಯ್ ಅವರು ಭೂಮಿಪೂಜೆಗೆ ಆಗಮಿಸುವವರಿಗೆ ಮೊಬೈಲ್ ತರಲು ಅವಕಾಶ ಇರುತ್ತದೆ. ಆದರೆ ಬ್ಯಾಗ್ಗಳನ್ನು ತರಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಆಮಂತ್ರಣ ಪತ್ರಿಕೆ ಇರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಹಾಗೇ ಪ್ರತಿ ಕಾರ್ಡ್ ಮೇಲೆಯೂ ಒಂದು ಕೋಡ್ ಇರುತ್ತದೆ. ಇದರಿಂದಾಗಿ ಒಂದು ಕಾರ್ಡ್ ಆಧಾರದ ಮೇಲೆ ಓರ್ವರಿಗೆ ಮಾತ್ರ ಪ್ರವೇಶ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)