ಇದೇ ಕಾರಣಕ್ಕೆ ನಾನು ಸಿನಿಮಾ ಪ್ರಮೋಷನ್‌ಗೆ ಹೋಗಲಿಲ್ಲ; ‘ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಗಳಿಗೆ ರಚಿತಾ ರಾಮ್ ತಿರುಗೇಟು | Rachita Ram

rachitharam
Published on

Rachita Ram| ನಟಿ ರಚಿತಾ ರಾಮ್ ವಿರುದ್ಧ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡದಿಂದ ಪ್ರಮೋಷನ್‌ಗೆ ಬಂದಿಲ್ಲ ಎಂಬ ವಿಚಾರ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು. ಇದೀಗ ರಚಿತಾ ರಾಮ್‌ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈಗ ಒಂದು ವಾರದಿಂದ ನನ್ನ ಬಗ್ಗೆ ಕೇಳಿಬಂದ ಎರಡು ಆರೋಪಗಳ ಬಗ್ಗೆ ನಾನು ಮಾತನಾಡುತ್ತೇನೆ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅವರು ಹೇಳಿರುವ ಮಾತುಗಳಿಂದ ನನಗೆ ನಿರಾಸೆ ಆಗಿದೆ. ಅದನ್ನು ನಾನು ಸ್ವೀಕರಿಸಲು ಆಗಲ್ಲ. ನಾನು ಒಂದು ಪ್ರಶ್ನೆ ಕೇಳುತ್ತೇನೆ, ಇದೇ ತಂಡದ ಜೊತೆ ನಾನು ಒಂದು ಮುಕ್ಕಾಲು ವರ್ಷ ಸಿನಿಮಾ ಮಾಡಿರುತ್ತೇನೆ. ಜನವರಿ 17ರಂದು ಈ ಸಿನಿಮಾ ಮೊದಲ ಬಾರಿ ಬಿಡುಗಡೆ ಆಯಿತು. ಹಲವು ಪ್ರೆಸ್ ಮೀಟ್ ಮತ್ತು ಮಾಧ್ಯಮಗಳ ಸಂದರ್ಶನ ಕೂಡ ನಡೆದಿತ್ತು. ಆ ಎಲ್ಲಾ ವೇದಿಕೆಗಳಲ್ಲಿ ನನ್ನ ಬಗ್ಗೆ ತುಂಬ ಒಳ್ಳೆಯ ಮಾತಾಡುತ್ತಾರೆ. ನನ್ನ ಬದ್ಧತೆ ಮತ್ತು ನಟನೆಗೆ ಮೆಚ್ಚುಗೆ ಸೂಚಿಸುತ್ತಾರೆ. ಸಿನಿಮಾದ ಪ್ರಚಾರದಲ್ಲಿ ತಂಡದ ಜೊತೆ ನಿಂತಿದ್ದಕ್ಕೆ ಧನ್ಯವಾದ ಹೇಳುತ್ತಾರೆ. ಆದರೆ ಅದೇ ನನ್ನ ತಂಡ ಇಂದು ನನ್ನ ಬಗ್ಗೆ ತುಂಬ ಕೆಟ್ಟದಾಗಿ ಮಾತನಾಡುತ್ತಿದೆ ಎಂದು ರಚಿತಾ ಬೇಸರ ಹೊರಹಾಕಿದ್ದಾರೆ.

ನಾನು ಇಲ್ಲಿ ಇನ್ನೊಂದು ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಇನ್ನೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುತ್ತದೆ. ಆ ಇಡೀ ಚಿತ್ರತಂಡ ಪ್ರಚಾರದಲ್ಲಿ ತೊಡಗಿಕೊಂಡಿರುತ್ತದೆ. ನಿರ್ದೇಶಕರು, ನಿರ್ಮಾಪಕರು ನನಗೆ ಕರೆ ಮಾಡುತ್ತಿರುತ್ತಾರೆ. ಒಂದು ದಿನ ನಮಗೆ ಪ್ರಚಾರಕ್ಕೆ ಟೈಮ್ ಕೊಡಿ ಎನ್ನುತ್ತಾರೆ. ನಾನು ನಾಗಶೇಖರ್ ಸರ್​ಗೆ ಹಾಗೂ ಕಿಟ್ಟಿ ಅವರಿಗೆ ಕೇಳಿಕೊಂಡೆ. ಒಂದು ದಿನ ಕೂಡ ನನಗೆ ಪ್ರಮೋಷನ್​ಗೆ ಹೋಗಲು ಬಿಡಲಿಲ್ಲ. ಯಾಕೆ, ಆ ನಿರ್ಮಾಪಕರದ್ದು ದುಡ್ಡು ಅಲ್ಲವಾ, ಅವರು ಲೇಡಿ ಪ್ರೊಡ್ಯೂಸರ್. ಅವರದ್ದು ಸಿನಿಮಾ ಅಲ್ಲವಾ, ಒಂದು ದಿನ ಕೂಡ ನನ್ನನ್ನು ಪ್ರಚಾರಕ್ಕೆ ಕಳಿಸಲಿಲ್ಲ’ ಎಂದು ರಚಿತಾ ಪ್ರಶ್ನಿಸಿದ್ದಾರೆ.

ನನ್ನ ಉಪಸ್ಥಿತಿಯಲ್ಲಿ ಇದೇ ಮಾಧ್ಯಮದವರ ಮುಂದೆ ಈ ಮಾತನ್ನು ಅವತ್ತೇ ಆಡಬೇಕಿತ್ತು. ಅಂದು ಯಾಕೆ ಆಡಲಿಲ್ಲ. ಅಂದು ಯಾಕೆ ಹೊಗಳಿದರು, ಈಗ ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ, ಸುಳ್ಳು, ನಾಟಕ ಅಂತ ನನಗೆ ಯಾಕೆ ಹೇಳ್ತಾರೆ, ನಿಜಕ್ಕೂ ಸುಳ್ಳು ಹೇಳುತ್ತಾ ಇರುವವರು ಯಾರು ಎಂದು ರಚಿತಾ ರಾಮ್ ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net