

ಮೈಸೂರು: ಮೈಸೂರಿನಲ್ಲಿ ನಟ ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೈಸೂರಿನ ಹುಲ್ಲೇನಹಳ್ಳಿ ಬಳಿ ಚಿತ್ರೀಕರಣ ಆರಂಭವಾಗಿದ್ದು, ಹುಲ್ಲೇನಹಳ್ಳಿಯ ಸೇತುವೆ ಮೇಲೆ ಚಿತ್ರೀಕರಣ ಮಾಡಲಾಗುತ್ತಿದೆ. ಈ ಜಾಗದಲ್ಲಿ ಜೈಲರ್ 2 ಸಿನಿಮಾದಲ್ಲಿ ಬರುವ ಸಾಹಸ ದೃಶ್ಯ ಸೆರೆ ಹಿಡಿಯಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಹುಲ್ಲೇನಹಳ್ಳಿ ಬಳಿಯೇ ಶೂಟಿಂಗ್ ನಡೆಯಲಿದೆ ಎನ್ನಲಾಗಿದ್ದು, ಅಲ್ಲಿಯವರೆಗೂ ಸಹ ಮೈಸೂರಿನಲ್ಲಿ ತಲೈವಾ ವಾಸ್ತವ್ಯ ಹೂಡಲಿದ್ದಾರೆ.
ಇನ್ನೂ ಶೂಟಿಂಗ್ ಸೆಟ್ ಬಳಿ ರಜನಿಕಾಂತ್ ಅವರು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದಿನ 'ಜೈಲರ್' ಸಿನಿಮಾದ ಗೆಟಪ್‌ನಲ್ಲಿಯೇ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. 'ಜೈಲರ್' ಚಿತ್ರವನ್ನು ಮಂಗಳೂರಿನಲ್ಲಿ ಶೂಟ್ ಮಾಡಲಾಗಿತ್ತು. ಇದೀಗ 'ಜೈಲರ್ 2' ಸಿನಿಮಾವನ್ನು ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
ಶೇಷವೆಂದರೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದ ಚಿತ್ರೀಕರಣವೂ ಇದೇ ಸ್ಥಳದಲ್ಲಿ ಆಗಿತ್ತು. ಸುಮಾರು 40 ವರ್ಷದ ಹಿಂದೆ ಇದೇ ಸ್ಥಳದಲ್ಲಿ ಡಾ.ರಾಜ್ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಹೊಸಬೆಳಕು’ ಚಿತ್ರೀಕರಣ ನಡೆದಿತ್ತು. ಹೊಸಬೆಳಕು ಸಿನಿಮಾದ ಹಾಡೊಂದರ ಚಿತ್ರೀಕರಣವನ್ನು ಇದೇ ಹುಲ್ಲೇನಹಳ್ಳಿ ಸೇತುವೆಯ ಬಳಿ ಮಾಡಲಾಗಿತ್ತು. ಇದೀಗ ರಜನಿಕಾಂತ್ ಅವರು ‘ಜೈಲರ್ 2’ ಸಿನಿಮಾದ ಚಿತ್ರೀಕರಣವನ್ನು ಅದೇ ಸ್ಥಳದಲ್ಲಿ ಮಾಡುತ್ತಿದ್ದಾರೆ.
(ಏಜೆನ್ಸೀಸ್)
ಜೈಲರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾನಲ್ಲಿ ರಜನಿಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ಕಿಶೋರ್, ತಮನ್ನಾ ಭಾಟಿಯಾ, ಸುನಿಲ್ ಇನ್ನೂ ಹಲವಾರು ನಟರು ನಟಿಸಿದ್ದರು. ‘ಜೈಲರ್ 2’ ಸಿನಿಮಾನಲ್ಲಿಯೂ ಶಿವಣ್ಣ, ಮೋಹನ್ಲಾಲ್, ಜಾಕಿ ಶ್ರಾಫ್ ಅವರುಗಳು ಇರಲಿದ್ದು, ಇವರ ಜೊತೆಗೆ ಬಾಲಕೃಷ್ಣ ಸಹ ಇರಲಿದ್ದಾರೆ ಎಂದು ಹೇಳಲಾಗಿದೆ. ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡುತ್ತಿದ್ದು, ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕಲಾನಿಧಿ ಮಾರನ್ ಅವರು ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ.