ರಾಜ್ಯದ ಅರ್ಥ ವ್ಯವಸ್ಥೆ ಚಿತ್ರಣ ಹೇಗಿದೆ ಗೊತ್ತಾ?

vidhana soudha
Published on

ಬೆಳಗಾವಿ: ಸರ್ಕಾರ ಕೈಗೊಂಡ ವ್ಯಾಪಕವಾದ ಲಸಿಕಾ ಅಭಿಯಾನ ಹಾಗೂ ಇತರ ಕ್ರಮಗಳಿಂದಾಗಿ ಆರ್ಥಿಕ ಚಟುವಟಿಕೆಯು 2021-22ರ ಎರಡನೇ ತ್ರೖೆಮಾಸಿಕದಿಂದ ಚೇತರಿಸಿಕೊಂಡಿದೆ. 2ನೇ ಅಲೆಯು ಸುಧಾರಿಸಿದ ನಂತರ ನಿಧಾನಗತಿಯೊಂದಿಗೆ ಎಲ್ಲ ಆರ್ಥಿಕ ಚಟುವಟಿಕೆ ಪ್ರಾರಂಭವಾಗಿ ರಾಜಸ್ವ ಸಂಗ್ರಹ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ತಲುಪುತ್ತಿದೆ. ಆರ್ಥಿಕ ಇಲಾಖೆಯು ಸಿದ್ಧಪಡಿಸಿದ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ (2021-22) ಪರಿಶೀಲನೆ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.

ಕೇಂದ್ರ ಸರ್ಕಾರವು 2021-22ರಲ್ಲಿ ಕರ್ನಾಟಕದ ಜಿಎಸ್​ಡಿಪಿ 17,21,336 ಕೋಟಿ ರೂ. ಎಂದು ಅಂದಾಜಿದೆ ಅದರಂತೆ ರಾಜ್ಯವನ್ನು ತನ್ನ ವಿತ್ತೀಯ ನಿಯತಾಂಕಗಳಿಗಾಗಿ ತನ್ನ ಜಿಎಸ್​ಡಿಪಿ ಪರಿಷ್ಕರಿಸಿದೆ. ಈ ಆಧಾರದ ಮೇಲೆ 2021-21ರ ವಿತ್ತೀಯ ಕೊರತೆಯು ಜಿಎಸ್​ಡಿಪಿಯ ಶೇ.3.44 ಮತ್ತು ರಾಜಸ್ವ ಕೊರತೆಯು ಜಿಎಸ್​ಡಿಪಿಯ ಶೇ.0.88ರಷ್ಟಾಗಿದೆ. ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣೆಗಾಗಿ ವೆಚ್ಚದ ಮೇಲಿನ ಬದ್ಧತೆ ಹೆಚ್ಚಾಗಿರುವುದನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ನೇತೃತ್ವದ ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಗಮನಿಸಿದೆ. ಅಲ್ಲದೆ, ರಾಜ್ಯ ವಿಪತ್ತು ನಿರ್ವಹಣಾ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಷರತ್ತುಗಳಿಗಿಂತ ರಾಜ್ಯವು ತನ್ನ ಪಾಲನ್ನು ಹೆಚ್ಚುವರಿಯಾಗಿ ಪರಿಹಾರ ಕಾರ್ಯಗಳಿಗೆ ನೀಡುತ್ತಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ರಾಜ್ಯವು ವಿಪತ್ತು ಪರಿಹಾರದ ವೆಚ್ಚಕ್ಕೆ ಬದ್ಧವಾಗಿರಬೇಕು ಎಂದು ಶಿಫಾರಸು ಮಾಡಿದೆ. 2021-22ರ ಮೊದಲಾರ್ಧದಲ್ಲಿ ಆಯವ್ಯಯ ಅಂದಾಜುಗಲಿಗೆ ಹೋಲಿಸಿದರೆ ಕಡಿಮೆ ವೆಚ್ಚದ ಸನ್ನಿವೇಶವನ್ನು ಸಮಿತಿ ವಿಶ್ಲೇಷಿಸಿದೆ. ಆದ್ದರಿಂದ ಆರೋಗ್ಯ, ಶಿಕ್ಷಣ, ಇತ್ಯಾದಿ ಸಾಮಾಜಿಕ ಮೂಲ ಸೌಕರ್ಯದ ಪ್ರಮುಖ ಕ್ಷೇತ್ರಗಳ ಮೇಲಿನ ವೆಚ್ಚವನ್ನು ಹೆಚ್ಚಿಸುವಂತೆ ಆರ್ಥಿಕ ಇಲಾಖೆಗೆ ಸಮಿತಿ ಸೂಚಿಸಿದೆ.

ಹೊಣೆಗಾರಿಕೆ ಏರುಮುಖ: ಸಾರ್ವಜನಿಕ ಋಣದಲ್ಲಿ ಬಾಕಿ ಇರುವ ಎಲ್ಲ ಹೊಣೆಗಾರಿಕೆಗಳು, ಸಾರ್ವಜನಿಕ ಲೆಕ್ಕ ಮತ್ತು ಆಯವ್ಯಯದ ಹೊರಗಿನ ಸಾಲಗಳನ್ನು ಒಳಗೊಂಡ ಒಟ್ಟು ಬಾಕಿ ಇರುವ ಹೊಣೆಗಾರಿಕೆಗಳನ್ನು ಲೆಕ್ಕ ಮಾಡಲಾ ಗುತ್ತದೆ. ಇದು ಹೊಣೆಗಾರಿಕೆಯ ವ್ಯಾಪ್ತಿಯನ್ನು ಪೂರ್ಣವಾಗಿ ಒಳಗೊಳ್ಳುತ್ತದೆ. 2021-22ರ ಆರ್ಥಿಕ ವರ್ಷದ ಅಂತ್ಯಕ್ಕೆ ಒಟ್ಟು ಹೊಣೆಗಾರಿಕೆಯು ಜಿಎಸ್​ಡಿಪಿಯ ಶೇ.26.66 ಆಗುವುದು ಎಂದು ಆಯವ್ಯಯದಲ್ಲಿ ಅಂದಾಜಿಸಲಾಗಿದೆ. 2020-21ರಲ್ಲಿ ಬಾಕಿ ಇರುವ 3,68,692 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಗಳು 2021-22ರಲ್ಲಿ 4,57,899 ಕೋಟಿ ರೂ.ಗೆ ಹೆಚ್ಚಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net