Bihar Election | ಬುರ್ಖಾ ಧರಿಸಿ ಮತದಾನ ಮಾಡಲು ಇದು ಪಾಕಿಸ್ತಾನವಲ್ಲ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

Girirajsingh
Published on

ಪಾಟ್ನಾ: ಇಡೀ ದೇಶದ ಗಮನಸೆಳೆದಿರುವ ಬಿಹಾರ ವಿಧಾನಸಭಾ ಚುನಾವಣೆಯ (Bihar Election) ಮೊದಲ ಹಂತದ ಮತದಾನ ಇಂದು (ಗುರುವಾರ ನ 6) ಬೆಳಿಗ್ಗೆಯಿಂದ ಆರಂಭವಾಗಿದ್ದು, ಬರಹಿಯಾದಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬುರ್ಖಾ ಧರಿಸಿ ಮತದಾನ ಮಾಡಲು ಇದು ಷರಿಯಾ ಕಾನೂನು ಜಾರಿಯಲ್ಲಿರುವ ಪಾಕಿಸ್ತಾನವಲ್ಲ ಎಂದರು.

ಚುನಾವಣಾ ಆಯೋಗವು ಪ್ರತಿ ಮತಗಟ್ಟೆಯಲ್ಲೂ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಿದ್ದು, ಬುರ್ಖಾ ಧರಿಸಿ ಮತದಾನ ಕೇಂದ್ರಕ್ಕೆ ಬಂದರೆ ಅಂತಹವರನ್ನು ಅಂಗನವಾಡಿ ಕಾರ್ಯಕರ್ತೆಯರು ಸರಿಯಾದ ರೀತಿಯಲ್ಲಿ ಪರಿಶೀಲಿಸಲಿದ್ದಾರೆ, ಇದನ್ನು ಧರ್ಮಕ್ಕೆ ಲಿಂಕ್ ಮಾಡುವುದು ಸರಿ ಅಲ್ಲ, ಬುರ್ಖಾ ಧರಿಸಿ ವೋಟ್​ ಮಾಡಲು ಇಲ್ಲಿ ಷರಿಯಾ ಕಾನೂನು ಜಾರಿ ಇಲ್ಲ ಎಂದರು.

ಬಿಹಾರ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿಯ ವಿಷಯಾಧಾರಿತವಾಗಿ ನಡೆಯಲಿದೆ, ವಿಷಯ ಸರಳವಾಗಿದ್ದು, ಬಡವರ ಉನ್ನತಿ ದೊಡ್ಡದು. ಅಭಿವೃದ್ಧಿ ವಿರುದ್ಧ ಜಂಗಲ್ ರಾಜ್, ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವುದು ಲಾಲು ಪ್ರಸಾದ ಯಾದವ್​ರ ಆರ್​​ಜೆಡಿ ಪಕ್ಷದ ಕಾರ್ಯಸೂಚಿಯಾಗಿದೆ ಎಂದು ಹೇಳಿದರು.

ಬಿಜೆಪಿ ನೇತೃತ್ವದ ಮೈತ್ರಿಕೂಟ ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಗಿರಿರಾಜ್​​ ಸಿಂಗ್, ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ, ಮತದಾರರು ಯಾವುದೇ ಅಭ್ಯರ್ಥಿಗಳ ಮುಖ ನೋಡಬೇಡಿ. ನಿತೀಶ್ ಕುಮಾರ್ ಮುಖ ನೋಡಿ, ಬಡವರಿಗಾಗಿ, ಯುವಕರಿಗಾಗಿ, ರೈತರಿಗಾಗಿ ಕೆಲಸ ಮಾಡಿದ ನರೇಂದ್ರ ಮೋದಿ ಮುಖ ನೋಡಿ ಮತ ನೀಡಿ ಎಂದರು.

ಬಿಹಾರ ವಿಧಾನಸಭಾ ಚುನಾವಣೆಗಳು ಇಂದು (ನವೆಂಬರ್ 6) ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್​ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net