

ನವದೆಹಲಿ: ಹೇಗಿದ್ದ ಬದುಕು ಎಲ್ಲಿಗೆ ಹೋಗಿ ಮುಟ್ಟಿರುತ್ತದೆ ಎಂದು ಹೇಳುವುದು ಕಷ್ಟ. ಅನಿರೀಕ್ಷಿತ ತಿರುವುಗಳು ಯಾವ ಕೊನೆಯನ್ನೂ ಮುಟ್ಟಿಸಬಹುದು. ಅಂಥ ಒಂದು ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ 'ಒಬ್ಬಳು' ಈಗ ಬ್ಯೂಟಿಕ್ವೀನ್. ಈಕೆಯ ಸಾಧನೆ ಇತರರಿಗೆ ಪ್ರೇರಣೆ ಹಾಗೂ ಮಾದರಿ ಎಂದರೂ ತಪ್ಪಲ್ಲ. ಏಕೆಂದರೆ ಈಕೆ ಒಂದು ಕಾಲದಲ್ಲಿ ಭಿಕ್ಷುಕಿ, ಅತ್ಯಾಚಾರ ಸಂತ್ರಸ್ತೆ. ಇದು ಫಸ್ಟ್ ಟ್ರಾನ್ಸ್ಜೆಂಡರ್ ಇಂಟರ್ನ್ಯಾಷನಲ್ ಬ್ಯೂಟಿಕ್ವೀನ್ ಎನಿಸಿಕೊಂಡಿರುವ ನಾಝ್ ಜೋಶಿಯ ದುರಂತಮಯ ಹಿನ್ನೆಲೆ.
ನಾಝ್ ಜೋಶಿ 2021-22ರ ಎಂಪ್ರೆಸ್ ಅರ್ಥ್ ಶೀರ್ಷಿಕೆಗೆ ಪಾತ್ರರಾಗಿದ್ದು, ಪ್ರಪ್ರಥಮ ತೃತೀಯಲಿಂಗಿ ಬ್ಯೂಟಿಕ್ವೀನ್ ಎನಿಸಿಕೊಂಡಿರುತ್ತಾರೆ. ನಾಝ್ ದೆಹಲಿಯಲ್ಲಿ ಹುಟ್ಟಿದ್ದು, ಆರಂಭದಲ್ಲಿ ನೋಡಲು ಹುಡುಗನಂತೆ ಕಾಣಿಸಿದರೂ ವರ್ತನೆ ಹುಡುಗಿಯಂತಿತ್ತು. ಕೊನೆಗೆ ಈಕೆ ತೃತೀಯಲಿಂಗಿ ಎಂದು ಗೊತ್ತಾದ ತಕ್ಷಣ ತಾಯಿ ತನ್ನ ತಮ್ಮನಿಗೆ ನಾಝ್ಳನ್ನು ಸಲಹಲು ನೀಡಿದ್ದಳು. ಆದರೆ ಸೋದರಮಾವ ಹತ್ತರ ವಯಸ್ಸಿನ ನಾಝ್ ಮೇಲೆ ತನ್ನ ಗೆಳೆಯರೊಂದಿಗೆ ಸೇರಿ ಅತ್ಯಾಚಾರ ಮಾಡಿಬಿಟ್ಟಿದ್ದ.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದ ನಾಝ್ ಆಸ್ಪತ್ರೆಯಲ್ಲಿದ್ದಾಗ ಇನ್ನೊಬ್ಬ ತೃತೀಯಲಿಂಗಿ ವ್ಯಕ್ತಿಯನ್ನು ಕರೆದೊಯ್ದು ತನ್ನೊಂದಿಗೆ ಇರಿಸಿಕೊಂಡಿದ್ದರು. ಬಳಿಕ ಬೀದಿಯಲ್ಲಿ ಭಿಕ್ಷಾಟನೆ ಮಾಡಿದ್ದ ನಾಝ್, ಜೀವನ ನಿರ್ವಹಣೆಗಾಗಿ ಪಾರ್ಲರ್ಗಳಲ್ಲಿ ಮಸಾಜ್ ಮಾಡುವ ಕೆಲಸ ಕೂಡ ಮಾಡಿದ್ದಳು.
ಈ ಎಲ್ಲ ಸಂಕಷ್ಟಗಳ ನಡುವೆಯೂ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದ ನಾಝ್, 2013ರಲ್ಲಿ ಲಿಂಗಪರಿವರ್ತನೆ ಮಾಡಿಕೊಂಡು ರೂಪದರ್ಶಿಯಾದರು. ಈಗ ಬ್ಯೂಟಿಕ್ವೀನ್ ಆಗಿ ಹೊರಹೊಮ್ಮಿದ್ದಾರೆ. ನಂತರ ಟ್ರಾನ್ಸ್ಜೆಂಡರ್ ಸೆಕ್ಸ್ವರ್ಕರ್ ಒಬ್ಬರ ಫೋಟೋಶೂಟ್ಗಾಗಿ ನಿರೀಕ್ಷೆಯಲ್ಲಿ ಫೋಟೋಗ್ರಾಫರ್ವೊಬ್ಬರನ್ನು ಭೇಟಿಯಾದ ನಾಝ್, ಅಲ್ಲಿ ಒಂದು ಫೋಟೋಶೂಟ್ ಮಾಡಿಸಿಕೊಂಡರು. ಇದು ಸೆನ್ಸೇಷನಲ್ ಎನಿಸಿ ಮ್ಯಾಗಜಿನ್ ಕವರ್ಪೇಜ್ನಲ್ಲಿ ರಾರಾಜಿಸಿತು. ನಂತರ ಭಾರತದ ಪ್ರಥಮ ತೃತೀಯಲಿಂಗಿ ಬ್ಯೂಟಿಕ್ವೀನ್ ಆಗಿ ಹೊರಹೊಮ್ಮಿದ ನಾಝ್, ಕ್ರಮೇಣ 8 ಸೌಂದರ್ಯಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದು, ಈಗ ಪ್ರಪ್ರಥಮ ಟ್ರಾನ್ಸ್ಜೆಂಡರ್ ಇಂಟರ್ನ್ಯಾಷನಲ್ ಬ್ಯೂಟಿಕ್ವೀನ್ ಆಗಿ ಹೊರಹೊಮ್ಮಿದ್ದಾರೆ. -ಏಜೆನ್ಸೀಸ್