

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇದೇ ಏಪ್ರಿಲ್ನಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಅಂತೆಯೇ, ಈ ಬಾರಿ ಜಗತ್ತಿನಾದ್ಯಂತ ಜನಾದೇಶ ಪರ್ವ ರಂಗೇರಿದ್ದು, 50ಕ್ಕೂ ಅಧಿಕ ದೇಶಗಳಲ್ಲಿ ಚುನಾವಣೆ ನಡೆಯಲಿವೆ. ಬಾಂಗ್ಲಾದೇಶ, ಪಾಕಿಸ್ತಾನ, ರಷ್ಯಾದಲ್ಲಿ ವರ್ಷಾರಂಭದಲ್ಲೇ ಚುನಾವಣೆ ಮುಗಿದಿದೆ. ಇತರ ಬೃಹತ್ ರಾಷ್ಟ್ರಗಳಲ್ಲಿ ಚುನಾವಣೆ ಹೇಗೆ ನಡೆಯುತ್ತೆ, ಅಲ್ಲಿನ ಪ್ರಕ್ರಿಯೆ ಸರಳವೋ, ಸಂಕೀರ್ಣವೋ ಎಂಬ ಬಗೆಗಿನ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಚುನಾವಣೆಯಲ್ಲಿ ಜನರು ಅಧ್ಯಕ್ಷರನ್ನು ನೇರವಾಗಿ ಚುನಾಯಿಸುವುದಿಲ್ಲ. ಅಮೆರಿಕದ ಚುನಾಯಕ ಸಮುದಾಯ (ಇಲೆಕ್ಟೋರಲ್ ಕಾಲೇಜ್) ಎನ್ನಲಾಗುವ ವ್ಯವಸ್ಥೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಆಯ್ಕೆ ಯಾರು ಎಂಬುದನ್ನು ನಾಗರಿಕರು ಮತದಾನದ ಮೂಲಕ ಚುನಾಯಿಸುತ್ತಾರೆ. ಹೀಗೆ ಚುನಾಯಿತರಾದವರು ರಾಷ್ಟ್ರದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇರವಾಗಿ ಚುನಾಯಿಸುತ್ತಾರೆ. ಒಕ್ಕೂಟದ ಕಾನೂನುಗಳು ಮತ್ತು ಸಂಸ್ಥಾನದ ಕಾನೂನುಗಳ ಸಂಯೋಜನೆಯೊಂದು ಈ ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಅಮೆರಿಕದ ಪ್ರತಿ ಸಂಸ್ಥಾನಕ್ಕೂ, ಅಂದರೆ ರಾಜ್ಯಕ್ಕೂ ನಿರ್ದಿಷ್ಟ ಸಂಖ್ಯೆಯ ಅಧ್ಯಕ್ಷ ಚುನಾಯಕ ಸಮುದಾಯದ ಸದಸ್ಯರನ್ನು ನಿಗದಿಪಡಿಸಲಾಗಿರುತ್ತದೆ ಮತ್ತು ಅಮೆರಿಕದ ಕಾಂಗ್ರೆಸ್ನಲ್ಲಿನ ಅದರ ಸೆನೆಟರ್ಗಳು ಮತ್ತು ಪ್ರತಿನಿಧಿಗಳ ಸಂಖ್ಯೆಗೆ ಈ ಚುನಾಯಕ ಸದಸ್ಯರ ಸಂಖ್ಯೆ ಸಮನಾಗಿರುತ್ತದೆ.
ಬೇಕು 270 ಮತ: ಚುನಾಯಿತ ಸದಸ್ಯರನ್ನು ಆರಿಸುವ ವಿಧಾನವನ್ನು ನಿಯೋಜಿಸುವುದಕ್ಕೆ ಪ್ರತಿ ಸಂಸ್ಥಾನದ ಶಾಸನಸಭೆಗೆ ಅವಕಾಶ ನೀಡಲಾಗಿರುತ್ತದೆ. ಹೀಗಾಗಿ ಚುನಾವಣೆಯ ದಿನದಂದು ನಡೆಯುವ ಸಾರ್ವಜನಿಕ ಮತದಾನವನ್ನು ವಿವಿಧ ಸಂಸ್ಥಾನಗಳು ನಿರ್ವಹಿಸುತ್ತವೆಯೇ ಹೊರತು, ಫೆಡರಲ್ ಸರ್ಕಾರ ಇದರಲ್ಲಿ ನೇರವಾಗಿ ತೊಡಗಿಸಿಕೊಳ್ಳುವುದಿಲ್ಲ. ಅಂದರೆ, ಪರೋಕ್ಷ ಚುನಾವಣೆ ಮೂಲಕ ನಡೆಯುವ ಅಧ್ಯಕ್ಷರ ಆಯ್ಕೆಯಲ್ಲಿ ಸಾರ್ವಜನಿಕರ ನೇರ ತೊಡಗಿಸಿಕೊಳ್ಳುವಿಕೆ ಅಥವಾ ಜನಪ್ರಿಯ ಮತಗಳಿಗೆ ಅವಕಾಶವಿರುವುದಿಲ್ಲ; ಬದಲಿಗೆ 435 ಮಂದಿ ಮತದಾರರ ಪ್ರತಿನಿಧಿಗಳು ಮತ್ತು ಪ್ರತಿ ಸಂಸ್ಥಾನ/ರಾಜ್ಯದಿಂದ ಇಬ್ಬರು ಸೆನೆಟರುಗಳಂತೆ ಒಟ್ಟು 100 ಮಂದಿ ಸೆನೆಟರುಗಳು ಅಧ್ಯಕ್ಷರ ನೇರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಚುನಾಯಕ ಸದಸ್ಯರು ಯಾರಿಗೆ ಬೇಕಾದರೂ ಮತ ನೀಡಬಹುದು, ಆದರೆ ಅವರು ತಮ್ಮ ನಿಯೋಜಿತ ಅಭ್ಯರ್ಥಿಗೇ ಮತ ನೀಡುವುದು ವಾಡಿಕೆ (ಕೆಲ ಸಂದರ್ಭ ಹೊರತುಪಡಿಸಿ). ಅವರ ಮತಗಳನ್ನು ಜನವರಿ ಆರಂಭದಲ್ಲಿ ಪ್ರಮಾಣೀಕರಿಸುವ ಕಾಂಗ್ರೆಸ್, ಚುನಾಯಕ ಸದಸ್ಯರ ಅಂತಿಮ ತೀರ್ಪಗಾರನಾಗಿರುತ್ತದೆ. ಅಮೆರಿಕದಲ್ಲಿ ಒಟ್ಟು 50 ಸಂಸ್ಥಾನ/ರಾಜ್ಯಗಳಿದ್ದು ಇವು ಒಟ್ಟಾರೆಯಾಗಿ 538 ಸ್ಥಾನಗಳನ್ನು ಹೊಂದಿವೆ. ಒಬ್ಬ ಪ್ರತಿನಿಧಿಗೆ ಒಂದು ಮತ. ಅಮೆರಿಕದ ಅಧ್ಯಕ್ಷನಾಗಲು ಅಭ್ಯರ್ಥಿ ಕನಿಷ್ಠ 270 ಮತಗಳನ್ನು ಪಡೆಯಬೇಕು.
ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಚುನಾವಣೆಗಳು ಒಟ್ಟಿಗೇ ನಡೆಯುತ್ತವೆ. ಅಂದರೆ, ‘ಒಂದು ದೇಶ-ಒಂದು ಚುನಾವಣೆ’ಯನ್ನು ದ.ಆಫ್ರಿಕಾ ಈಗಾಗಲೇ ಅಳವಡಿಸಿಕೊಂಡಿದೆ. ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಚುನಾವಣೆ (ನಮ್ಮಲ್ಲಿನ ವಿಧಾನಸಭೆ ಚುನಾವಣೆಯಂತೆ) ನಡೆದ ಎರಡು ವರ್ಷಗಳ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತದೆ. ಇದೇ ವರ್ಷದ ಮೇ 29ರಂದು ಇಲ್ಲಿ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಚುನಾವಣೆ ನಡೆಯಲಿದೆ. 18 ವರ್ಷ ತುಂಬಿದ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲ ವಯಸ್ಸಿನವರೂ ಮತದಾನಕ್ಕೆ ಅರ್ಹರು. 1994ರ ಮುಂಚೆ ಈ ಪರಿಸ್ಥಿತಿ ಇರಲಿಲ್ಲ. ವರ್ಣಭೇದ ನೀತಿ ಬೇರುಬಿಟ್ಟಿತ್ತು ಮತ್ತು ಕಪು್ಪವರ್ಣೀಯರಿಗೆ ಮತಾಧಿಕಾರವೇ ಇರಲಿಲ್ಲ. ಆದರೆ, 1994ರಲ್ಲಿ ಈ ನ್ಯೂನತೆಯನ್ನು ಹೊಗಲಾಡಿಸಿ, ವಯಸ್ಸಿನ ಆಧಾರದ ಮೇಲೆ ಮತಾಧಿಕಾರ ನೀಡಲಾಯಿತು. ಇಲ್ಲಿ ಅಧ್ಯಕ್ಷರೇ ಸಂಸದೀಯ ವ್ಯವಸ್ಥೆಯ ಮುಖ್ಯಸ್ಥರು.
ಪ್ರಕ್ರಿಯೆ: ಜನರು ಇಲ್ಲಿ ನೇರವಾಗಿ ರಾಷ್ಟ್ರಾಧ್ಯಕ್ಷರನ್ನು ಚುನಾಯಿಸುವುದಿಲ್ಲ. ಬದಲಿಗೆ, ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ. ಪಕ್ಷಗಳಿಗೆ ಈ ಮತಗಳ ಆಧಾರದ ಮೇಲೆ 400 ಸ್ಥಾನಗಳ ಸಂಸತ್ತಿನಲ್ಲಿ ಸ್ಥಾನ (ಸೀಟು) ಹಂಚಿಕೆ ಮಾಡ ಲಾಗುತ್ತದೆ. ಈ ಪಕ್ಷಗಳ ಪ್ರತಿನಿಧಿಗಳು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ವರ್ಣನೀತಿ ವಿರುದ್ಧ ಜನಾಂದೋಲನ ನಡೆಸಿದ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ (ಎಎನ್ಸಿ) ಇಲ್ಲಿ ಕಳೆದ ಮೂವತ್ತು ವರ್ಷಗಳಿಂದ (1994ರಿಂದ) ಅಧಿಕಾರದಲ್ಲಿದೆ.
(ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ)
| ರವೀಂದ್ರ ಎಸ್.ದೇಶಮುಖ್, ವಿಜಯವಾಣಿ