

ಬೆಂಗಳೂರು: ಕಳೆದ ವರ್ಷ ಜೂನ್ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಈಗ 28 ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಹತಾಶ ನಡೆ, ದ್ವೇಷ, ಅಸೂಯೆ ರಾಜಕಾರಣ ಕಾಂಗ್ರೆಸ್ನ ಹುಟ್ಟುಗುಣ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
"ಸಿದ್ದರಾಮಯ್ಯನವರೇ, ಎನ್ಡಿಎ ಮೈತ್ರಿಕೂಟದ ಮೈಸೂರು ಚಲೋ ಪಾದಯಾತ್ರೆ ತಮ್ಮ ನಿದ್ದೆಗೆಡಿಸಿದೆ ಅಂತ ಗೊತ್ತಿದೆ. ಆದರೂ ತಮ್ಮಂತಹ ಹಿರಿಯ ನಾಯಕರು ಈ ರೀತಿ ಹತಾಶರಾಗಿ ವಿಪಕ್ಷ ನಾಯಕರ ಮೇಲೆ ಯಾವುದೋ ಹಳೆಯ ಕೇಸು ಕೆದಕಿ, ಏಕಾಏಕಿ ಎಫ್ಐಆರ್ ದಾಖಲಿಸುತ್ತೀರಿ ಅಂದರೆ ಯಾಕೋ ತಾವು ಬಹಳ ವಿಚಲಿತರಾದಂತೆ ಕಾಣುತ್ತದೆ. ವಾಲ್ಮೀಕಿ ಅಭಿವೃದ್ದಿ ನಿಗಮ ಮತ್ತು ಮುಡಾ ಹಗರಣಗಳಲ್ಲಿ ತಮ್ಮ ತಪ್ಪೇನು ಇಲ್ಲ ಎನ್ನುವುದಾದರೆ ಇಷ್ಟೊಂದು ಭಯವೇಕೆ? ಕೇಸು ಹಾಕಿ ವಿಪಕ್ಷ ನಾಯಕರನ್ನು ಬೆದರಿಸಿ ಬಾಯಿ ಮುಚ್ಚಿಸಬಹುದು ಎಂದು ಕೊಂಡಿದ್ದೀರಾ?" ಎಂದು ಪ್ರಶ್ನಿಸಿದರು.
"ನೀವು ಹಾದಿಬೀದಿಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತೀರಲ್ಲ, ಪ್ರತಿಭಟನೆ ಮಾಡಿದ್ದಕ್ಕೆ ವಿಪಕ್ಷ ನಾಯಕರ ಮೇಲೆ ಕೇಸು ಹಾಕುವುದು ಯಾವ ಸೀಮೆ ಪ್ರಜಾಪ್ರಭುತ್ವ? ಎಂತಹ ಸಂವಿಧಾನ ಪಾಲನೆ? ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿ ಬಿಜೆಪಿ ನಾಯಕರ ತಂಟೆಗೆ ಬಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಸಂಶಯವೇ ಇಲ್ಲ, ಹುಷಾರ್" ಎಂದು ಸಿಎಂಗೆ ಎಚ್ಚರಿಕೆ ರವಾನಿಸಿದ್ದಾರೆ.